ಮಿಸ್ ಕಾಲ್‌ನಿಂದ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ.. ! ಡೋಣಿ ತೀರದಲ್ಲೊಂದು ಇಂಟ್ರೆಸ್ಟಿಂಗ್ ಕ್ರೈಂ….!
ವಿಜಯಪುರ: ಮಿಸ್ ಕಾಲ್ ನಿಂದಾಗಿ ಉಂಟಾದ ಜಗಳವೊಂದು ಕೊಲೆಯಲ್ಲಿ ಅಂತ್ಯ ಕಂಡಿದೆ.
ಹೌದು, ತಾಳಿಕೋಟೆಯ ಮೂಕಿಹಾಳ ರಸ್ತೆಯ ಹತ್ತಿರದ ಡೋಣಿ ತೀರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಮಾ.17 ರಂದೇ ಈ ಘಟನೆ ನಡೆದಿದ್ದು 18 ರಂದು ಪ್ರಕರಣ ದಾಖಲಾಗಿದೆ.
ಡೋಣಿ ನದಿಗೆ ಹೊಂದಿಕೊಂಡಿರುವ ಪ್ರಕಾಶ ಕುಲಕರ್ಣಿ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ರಾಯಘಡ ಜಿಲ್ಲೆ ಮಾನಗಾಂವ ತಾಲೂಕಿನ ಪಾವಸುಳವಾಡಿ ಗ್ರಾಮದ ಸೋನು ಲಕ್ಷ್ಮಣ ಹೀಲಮ (35) ಎಂಬಾತ ಕೊಲೆಯಾಗಿದ್ದಾನೆ. ಗೋಪಾಲ ಮಾಧು ಜಾಧವ ಆರೋಪಿಯಾಗಿದ್ದು, ಈ ಬಗ್ಗೆ ಆತನ ಪತ್ನಿ ಮೀನಾ ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಡೋಣಿ ತೀರದಲ್ಲಿ ಜೀನಿ ಕಟ್ಟಿಗೆ ಕಡಿದು ಇದ್ದಿಲು ಮಾಡಲೆಂದು
ಪ್ರತೀ ವರ್ಷ ಬೇಸಿಗೆ ಕಾಲದಲ್ಲಿ ಮಹಾರಾಷ್ಟ್ರದಿಂದ ಸೋನು ಕುಟುಂಬ ವಲಸೆ ಬರುತ್ತದೆ. ಅದೇ ರೀತಿ ಈ ವರ್ಷ ತಾಳಿಕೋಟೆಯ ಶ್ರೀಕಾಂತ ಮಲ್ಲಪ್ಪ ಬೆಳ್ಳಗಿ ಎಂಬುವರು 20 ಸಾವಿರ ರೂ.ಮುಂಗಡ ನೀಡಿ ಸೋನು ಕುಟುಂಬವನ್ನು ಕೆಲಸಕ್ಕೆ ಕರೆತಂದಿದ್ದಾರೆ. ಮೂಕಿಹಾಳ ರಸ್ತೆಯ ಡೋಣಿ ನದಿಗೆ ಹೊಂದಿಕೊಂಡಿರುವ ಪ್ರಕಾಶ ಕುಲಕರ್ಣಿ ಇವರ ಜಮೀನಿನಲ್ಲಿ ಸಣ್ಣ ಗುಡಿಸಲು ಹಾಕಿಕೊಂಡು ಸೋನು ಕುಟುಂಬ ವಾಸವಾಗಿತ್ತು. ಇವರ ಜೊತೆಗೆ ಮಹಾರಾಷ್ಟ್ರದಿಂದ ಕೆಲಸಕ್ಕೆ ಬಂದ ಗೋಪಾಲ ಮಾಧು ಜಾಧವ ಕುಟುಂಬ ಹತ್ತಿರದಲ್ಲಿಯೇ ಬೀಡು ಬಿಟ್ಟಿತ್ತು.
ಮಾ. 17 ರಂದು ರಾತ್ರಿ 9.30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದ ಸಮಯದಲ್ಲಿ ಸೋನು ತನ್ನ ಸಂಬಂಧಿಕರಿಗೆ ಕರೆ ಮಾಡುವಾಗ ಆಕಸ್ಮಿಕವಾಗಿ ಕರೆ ಗೋಪಾಲ ಮಾಧು ಜಾಧವಗೆ ಹೋಗಿದೆ. ಈ ವೇಳೆ ಗೋಪಾಲ ತನಗೇಕೆ ಕರೆ ಮಾಡಿದ್ದೆ ಎಂದು ಸೋನು ಜೊತೆಗೆ ಜಗಳ ಮಾಡಿದ್ದಾನೆ. ಸೋನು ತಪ್ಪಾಗಿ ಕರೆ ಬಂದಿದೆ ಎಂದು ಹೇಳಿದರೂ ಕೇಳದೆ ಗೋಪಾಲ ಸೋನುಗೆ ತಲೆ, ಕಾಲಿಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ. ಕೂಡಲೇ ಸೋನುಗೆ ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸೋನು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.