ಲೋಣಿ ಬಿಕೆ ಗ್ರಾಮದ ಯೋಧ ನಿಧನ, ಶ್ರೀನಗರದಲ್ಲಿ ಸಂಭವಿಸಿದ ಅವಘಡ, ಆಕಸ್ಮಿಕ ಗುಂಡು ತಗುಲಿ ಸಾವು !
ವಿಜಯಪುರ: ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಸೇವಾ ನಿರತನಾಗಿದ್ದ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದ ಯೋಧ ನಿಧನರಾಗಿದ್ದಾರೆ.
ಮಂಗಳವಾರ ಸಂಜೆ ಸೇವೆಯಲ್ಲಿರುವಾಗ ಆಕಸ್ಮಿಕ ಗುಂಡು ತಗುಲಿ ಅಸುನೀಗಿದ್ದಾರೆ. ದಯಾನಾಂದ ಮಲ್ಲಿಕಾರ್ಜುನ ಪಾಟೀಲ (28) ಮೃತ ಯೋಧ. ಕಳೆದ ಐದು ವರ್ಷಗಳ ಹಿಂದೆ ಸಿಎಸ್ ಐಎಸ್ ಎಫ್ ಹುದ್ದೆಗೆ ನೇಮಕವಾಗಿದ್ದ ದಯಾನಂದ ಈಚೆಗಷ್ಟೆ ಮದುವೆಯಾಗಿದ್ದರು. ತಂದೆ ಮಲ್ಲಿಕಾರ್ಜುನ ಲಾರಿ ಚಾಲಕರಾಗಿದ್ದು ತಾಯಿ ಮನೆಗೆಲಸ ಮಾಡಕೊಂಡಿದ್ದಾರೆ. ದಯಾನಂದಗೆ ಒಬ್ಬರು ಅಣ್ಣ, ಇಬ್ಬರು ಅಕ್ಕ ಹಾಗೂ ಓರ್ವ ತಂಗಿ ಇದ್ದು, ಎಲ್ಲರೂ ಮದುವೆಯಾಗಿದ್ದಾರೆ.
ಕಡು ಬಡಕುಟುಂಬದಿಂದ ಬಂದಿರುವ ದಯಾನಂದ ಸೇನೆಗೆ ಸೇರಬೇಕೆಂಬ ಅಗಾಧ ಕನಸು ಕಟ್ಟಿಕೊಂಡು ಅಂದುಕೊಂಡಿದ್ದನ್ನು ಸಾಧಿಸಿದ್ದರು. ದಯಾನಂದ ಸೇನೆಗೆ ಸೇರಿದ ಬಳಿಕ ಕೊಂಚ ಬಡತನ ನಿವಾರಣೆಯಾಗಿತ್ತು. ಇದೀಗ ಆತನ ನಿಧನ ಸುದ್ದಿ ಕುಟುಂಬಕ್ಕೆ ಆಘಾತ ನೀಡಿದೆ.
ಈಗಾಗಲೇ ದಯಾನಂದನ ಕಳೆಬರ ತವರಿಗೆ ಕಳುಹಿಸಲಾಗಿದ್ದು ನಾಳೆಯಷ್ಟೊತ್ತಿಗೆ ಬೆಳಗಾವಿ ತಲುಪಬಹುದೆಂದು ಸೇನೆಯಿಂದ ಮಾಹಿತಿ ಲಭ್ಯವಾಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಶಾಸಕರಿಂದ ಸಾಂತ್ವನ:
ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ದಯಾನಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮಾತ್ರವಲ್ಲ, ದಯಾನಂದ ಅವರ ನಿಧನ ಸುದ್ದಿ ಆಘಾತ ತಂದಿದ್ದು ತಕ್ಷಣವೇ ಕುಟುಂಬಸ್ಥರನ್ನು ಸಂಪರ್ಕಿಸಿ ಧೈರ್ಯ ತುಂಬುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಸಾಧಿಸುತ್ತಿದ್ದು ದಯಾನಂದ ಅವರ ಕಳೆಬರವನ್ನು ತವರಿಗೆ ತರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದೆಂದು ತಿಳಿಸಿದರು.