ವಿಜಯಪುರ

ಗುಮ್ಮಟ ನಗರಿಯಲ್ಲಿ ಸಂಕ್ರಮಣಕ್ಕೆ ಹಾರುವುದೇ ಲೋಹದ ಹಕ್ಕಿ, ಸಚಿವ ಗೋವಿಂದ ಕಾರಜೋಳ ಹೇಳಿದ್ದೇನು?

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯ ಬಹುದಿನದ ಬೇಡಿಕೆ ಸಾಕಾರಗೊಳ್ಳುವ ಸಮಯ ಹತ್ತಿರವಾಗುತ್ತಿದೆ. ಬರುವ ಸಂಕ್ರಮಣದೊಳಗೆ ಲೋಹದ ಹಕ್ಕಿಯ ಹಾರಾಟದ ಸದ್ದು ಕೇಳಿ ಬರಲಿದೆ !
ಹೌದು, ವಿಮಾನ ನಿಲ್ದಾಣದ ಕಾಮಗಾರಿ ವರ್ಷಾಂತ್ಯದೊಳಗೆ ಪೂರ್ಣಗೊಳಿಸಿ ಸಂಕ್ರಮಣದ ಒಳಗಾಗಿ ವಿಮಾನಗಳು  ಹಾರಾಡಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೋಮವಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಖಡಕ್ ಆಗಿ ಸೂಚಿಸಿದ್ದಾರೆ.

ಸೋಮವಾರ ಬುರಾಣಪುರ ಬಳಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪರಿಶೀಲಿಸಿದ ಅವರು,  ಈ ವರ್ಷದ ಅಂತ್ಯದೊಳಗೆ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹೊಸ ವರ್ಷಕ್ಕೆ ವಿಮಾನಗಳು ಕಾರ್ಯಾಚರಿಸಲು ಬೇಕಾದ ವ್ಯವಸ್ಥೆ ಮಾಡಬೇಕೆಂದರು.
ಐತಿಹಾಸಿಕ ನಗರ ವಿಜಯಪುರಕ್ಕೆ ಇನ್ನಷ್ಟು ಮೆರುಗು ಬರುವ ರೀತಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು. ವಿಶ್ವಪ್ರಸಿದ್ಧ ಗೋಳಗುಮ್ಮಟ ವೀಕ್ಷಣೆಗಾಗಿ ವಿಜಯಪುರಕ್ಕೆ ಬರುವ ಜನರು ವಿಮಾನ ನಿಲ್ದಾಣಕ್ಕೂ ಭೇಟಿ ನೀಡಿ ನೋಡುವ ಹಾಗೆ ಆಕರ್ಷಣೀಯವಾಗಿ ನಿರ್ಮಿಸಬೇಕು. ವಿಮಾನ ನಿಲ್ದಾಣಕ್ಕೆ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ಸರ್ಕಾರದಿಂದ ಬೇಕಾದ ಎಲ್ಲ ಸಹಕಾರವನ್ನು ನಾವು ಒದಗಿಸಿದ್ದೇವೆ ಎಂದರು.
ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ವೈ.ಪವಾರ, ಕಾರ್ಯನಿರ್ವಹಣಾ ಅಭಿಯಂತ ವಿ.ಆರ್.ಹಿರೇಗೌಡರ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಅಭಿಯಂತರ ರಾಜು ಮುಜುಮದಾರ ಮತ್ತಿತರರಿದ್ದರು.

error: Content is protected !!