ವಿಜಯಪುರದಲ್ಲೇ ಮಾದರಿ ಕಾರ್ಯಕ್ರಮ, ಮಲ್ಲಯ್ಯನ ಭಕ್ತರಿಗೆ ಭವ್ಯ ಬೀಳ್ಕೊಡುಗೆ, 56ನೇ ವರ್ಷದ ಪಾದಯಾತ್ರೆಗೆ ಅದ್ದೂರಿ ಚಾಲನೆ
ವಿಜಯಪುರ: ಶರಣರು, ಸಂತರು, ಸಾಧು-ಸತ್ಫುರುಷರ ನಾಡಾದ ವಿಜಯಪುರ ಜಿಲ್ಲೆಯಲ್ಲಿಯೇ ಮಾದರಿ ಎನ್ನುವಂತೆ ಇಲ್ಲೊಂದು ಧಾರ್ಮಿಕ ಕಾರ್ಯಕ್ರಮ ಜನಮನ ಸೂರೆಗೊಂಡಿದೆ.
ಹೌಡು, ಸತತ 55 ವರ್ಷಗಳಿಂದ ಶ್ರೀಶೈಲಕ್ಕೆ ಪಾದಯಾತ್ರಾ ಮಾಡುತ್ತಿರುವ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಭಕ್ತರು ಈ ಬಾರಿ 56ನೇ ವರ್ಷದ ಪಾದಯಾತ್ರೆಗೆ ಅದ್ದೂರಿಯಾಗಿ ಚಾಲನೆ ನೀಡಿದರು.
ಬೃಹತ್ ನಂದಿಕೋಲು ಮೆರವಣಿಗೆ, ಚಿಟ್ಟ ಹಲಿಗೆ ಮೇಳ, ದಸರಾ ಗೊಂಬೆಗಳ ಕುಣಿತ, ಹೆಣ್ಣು ಮಕ್ಕಳ ಕೋಲಾಟ, ಭಕ್ತಿಗೀತೆಗಳ ಅನುರಣನ, ಪಲ್ಲಕ್ಕಿ ಉತ್ಸವ, ಭಕ್ತರ ಉದ್ಘೋಷದೊಂದಿಗೆ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಜಾತ್ರೋತ್ಸವಕ್ಕೆ ಪಾದಯಾತ್ರಾರ್ಥಿಗಳನ್ನು ಸಡಗರ ಹಾಗೂ ಸಂಭ್ರಮದೊಂದಿಗೆ ಬೀಳ್ಕೊಡಲಾಯಿತು.
ಗ್ರಾಮದ ಮಲ್ಲಿಕರ್ಜುನ ದೇವಸ್ಥಾನದಲ್ಲಿ ತಿಂಗಳ ಪರ್ಯಂತ ನಡೆದ ಪುರಾಣ ಕಾರ್ಯಕ್ರಮಕ್ಕೆ ಮಂಗಲ ಕೋರಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಅಲಂಕೃತ ರಥೋತ್ಸವದಲ್ಲಿ ಪೂಜ್ಯರನ್ನು ಹಾಗೂ ಮಲ್ಲಿಕಾರ್ಜುನನ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು.
ಮಾರ್ಗದುದ್ದಕ್ಕೂ ಭಜನಾಪದಗಳ, ಡೊಳ್ಳಿನ ಕುಣಿತ, ನಂದಿಕೋಲುಗಳ ಮೆರವಣಿಗೆ ಗಮನ ಸೆಳೆಯಿತು. ದಸರಾ ಮಾದರಿಯ ಭವ್ಯ ಗೊಂಬೆಗಳ ಕುಣಿತ ಭಕ್ತರನ್ನು ರಂಜಿಸಿದವು. “ಮಲ್ಲಯ್ಯವ್ವಾ ಮಲ್ಲಯ್ಯ ಪರ್ವತಗಿರಿ ಮಲ್ಲಯ್ಯ ಹಾಡಿಗೆʼ ಶಾಲಾ ಮಕ್ಕಳು ಹೆಜ್ಜೆ ಹಾಕಿದರು.
“ಹುಟ್ಟಿ ಬಂದೊಮ್ಮೆ ಶ್ರೀಶೈಲಕ ನಡೀರಿ, ಕಟ್ಟ ಕಡೆಗೆ ಮಲ್ಲಯ್ಯನ ಕೂಡಿರಿʼ ಎಂಬ ಭಕ್ತಿಗೀತೆಗೆ ವಿದ್ಯಾರ್ಥಿನಿಯರು ಕೋಲಾಟ ಪ್ರದರ್ಶಿಸಿದ್ದು ಅಮೋಘವಾಗಿತ್ತು. “ನಡಿ ನಡಿ ಮೊದಲ ಹೋಗೂನ ನಡಿ, ಗುಡ್ಡದ ಮಲ್ಲಯ್ಯನ ನೋಡೂನ ನಡಿ… ಎನ್ನುತ್ತ ಮಹಿಳೆಯರು ಮಾರ್ಗದದ್ದಕ್ಕೂ ಭಕ್ತಿಗೀತೆಗಳನ್ನು ಹಾಡಿ ತಮ್ಮ ಭಕ್ತಿಯ ಪರಾಕಾಷ್ಟೆ ಮೆರೆದರು.
ಅನೇಕರು ಪಾದಯಾತ್ರಾರ್ಥಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಬೆಲ್ಲ, ಸಕ್ಕರೆ ಹಂಚಿ ಸೇವೆ ಸಮರ್ಪಿಸಿದರು. ಪಾನಕ, ಮಜ್ಜಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವರು ಬಾಳೆ ಹಣ್ಣು ನೀಡಿದರೆ ಇನ್ನೂ ಕೆಲವರು ಮಾರ್ಗ ಮಧ್ಯೆ ಆರೋಗ್ಯ ಸುರಕ್ಷತೆಗಾಗಿ ವೈದ್ಯಕೀಯ ಕಿಟ್ ಹಂಚಿದರು. ಚಹಾ, ಚೂಡಾ ವ್ಯವಸ್ಥೆ ಕೂಡ ಇರಿಸಲಾಗಿತ್ತು. ಇನ್ನೂ ಕೆಲವರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಒಟ್ಟಿನಲ್ಲಿ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆಗೆ ಜಿಲ್ಲೆಯಲ್ಲಿಯೇ ಮಾದರಿ ಎನ್ನುವಂತೆ ಹಿರೇಮಸಳಿಯಲ್ಲಿ ಚಾಲನೆ ನೀಡಲಾಯಿತು.
ಆಧ್ಯಾತ್ಮ ಭಾರತದ ಜೀವಾಳ:
ಶ್ರೀಶೈಲ ಪಾದಯಾತ್ರೆ ಹಿನ್ನೆಲೆ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ಇಂಡಿಯ ಬಿಜೆಪಿ ಮುಖಂಡ ಕಾಸುಗೌಡ ಪಾಟೀಲ ಮಾತನಾಡಿ, ಭಾರತ ಧಾರ್ಮಿಕತೆಯ ದೇಶ. ಶರಣರು, ಸತ್ಪುರುಷರ ನಾಡು. ಇಂಥ ನಾಡಿನಲ್ಲಿ ಧಾರ್ಮಿಕತೆ ಎಲ್ಲಿಯವರೆಗೆ ಇರುವುದೋ ಅಲ್ಲೊಯವರೆಗೆ ದೇಶ ಸುಭದ್ರವಾಗಿರಲಿದೆ ಎಂದರು.
ಬರದಲ್ಲೂ ಭಾರತ ಸಂತೋಷದಿಂದಿರಲೂ ಧಾರ್ಮಿಕತೆಯೇ ಕಾರಣ ಎಂದರು.
ಪೂಜ್ಯ ಷಬ್ರ ರೇಣುಕ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ಮಳಿ, ಬೆಳಿ, ಧನ, ಧಾನ್ಯಗಳಿಂದ ಗ್ರಾಮ ಸಮೃದ್ಧವಾಗಿರಲಿ ಎಂದು ಆಶಿಸಿದರು. ಪುರಣಿಕರಾದ ಶಂಕ್ರಯ್ಯ ಶಾಸ್ತ್ರೀ, ಪುಟ್ಟುಗೌಡ ಪಾಟೀಲ, ಶಿಕ್ಷಕ ಐ.ಎಸ್. ಮಾಶ್ಯಾಳ ಮತ್ತಿತರರಿದ್ದರು.
ಕಾಸುಗೌಡ ಪಾಟೀಲ ಹಾಗೂ ಪುಟ್ಟುಗೌಡ ಪಾಟೀಲ ಇವರು ಕಂಬಿ ಹೊತ್ತು, ನಂದಿಕೋಲು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.