ವಿಜಯಪುರ

ಇಂಡಿ ನೂತನ ಜಿಲ್ಲೆಯಾಗುವುದೇ? ನನಸಾಗುವುದೇ ಯಶವಂತರಾಗೌಡರ ಕನಸು ? ಸದನದಲ್ಲಿ ಸರ್ಕಾರ ನೀಡಿದ ಉತ್ತರವೇನು? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ….

ವಿಜಯಪುರ: ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು ಹೆಗ್ಗಳಿಕೆ ಹೊತ್ತ ಕರ್ನಾಟಕದ ಕಟ್ಟ ಕಡೆಯ ಹಾಗೂ ಮಹಾರಾಷ್ಟ್ರಕ್ಕೆ ತೀರ ಹತ್ತಿರದ ಪ್ರದೇಶವಾದ ಇಂಡಿ ಜಿಲ್ಲೆಯಾಗಬೇಕೆಂಬುದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಕನಸು.
ಈ ಕನಸು ನನಸು ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿರುವ ಯಶವಂತರಾಯಗೌಡ ಪಾಟೀಲ ಇದೀಗ ಆ ವಿಷಯವನ್ನು ರಾಜಧಾನಿಗೆ ಕೊಂಡೊಯ್ದಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.
ಅಂದ ಹಾಗೆ ಸರ್ಕಾರ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? ಇಲ್ಲಿದೆ ನೋಡಿ ವಿವರ…..
ರಾಜ್ಯದಲ್ಲಿ ಒಟ್ಟು 31 ಜಿಲ್ಲೆಗಳು ಹಾಗೂ 237 ತಾಲೂಕುಗಳಿವೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ತುಮಕೂರು ಜಿಲ್ಲೆಯ ತಿಪಟೂರು, ರಾಯಚೂರು ಜಿಲ್ಲೆಯ ಸಿಂಧನೂರ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಅಥಣಿ, ವಿಜಯಪುರ ಜಿಲ್ಲೆಯ ಇಂಡಿ, ಬೀದರ್ ಜಿಲ್ಲೆಯ ಬಸವ ಕಲ್ಯಾಣ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಗಳನ್ನು ಹೊಸ ಜಿಲ್ಲೆಯಾಗಿ ರಚಿಸುವಂತೆ ಕೋರಿಕೆಗಳು ಸ್ವೀಕೃತಗೊಂಡಿವೆ. ಈ ಕೋರಿಕೆಗಳನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧ ಪಟ್ಟ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಿಕೊಡಲಾಗಿದೆ. ಆದರೆ, ನೂತನ ಜಿಲ್ಲೆ ರಚನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಉತ್ತರಿಸಿದ್ದಾರೆ.
ಅಲ್ಲದೇ, ಯಾವುದೇ ಒಂದು ಪ್ರದೇಶ ಅಥವಾ ತಾಲೂಕನ್ನು ಜಿಲ್ಲೆಯನ್ನಾಗಿ ರಚಿಸುವ ಸಂದರ್ಭದಲ್ಲಿ ಅಲ್ಲಿನ ಭೌಗೋಳಿಕ ಸನ್ನಿವೇಶ, ಜನಸಂಖ್ಯೆ, ಹಿಂದುಳಿದಿರುವಿಕೆ, ಹೊಸದಾಗಿ ಜಿಲ್ಲೆಯನ್ನಾಗಿಸುವುದರಿಂದ ಅನುಕೂಲ, ಸಾರ್ವಜನಿಕ ಆಶೋತ್ತರಗಳಿಗೆ ಸ್ಪಂದನೆ, ತಾಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಿಗಿರುವ ದೂರ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿ ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಾಮರ್ಶಿಸಲಾಗುತ್ತದೆ. ಇದರ ಜೊತೆಗೆ ನೂತನ ಜಿಲ್ಲೆಗಳನ್ನು ರಚಿಸುವ ವಿಷಯ ಸರ್ಕಾರದ ಸಾಮಾನ್ಯ ನೀತಿಗೆ ಸಂಬಂಧಿಸಿದ್ದಾಗಿದೆ. ಯಾವುದೇ ತಾಲೂಕು ಅಥವಾ ಪ್ರದೇಶವನ್ನು ಜಿಲ್ಲೆಯನ್ನಾಗಿಸುವ ಸಂದರ್ಭ ಭೌಗೋಳಿಕ ಹಾಗೂ ಆಡಳಿತಾತ್ಮಕ ಅಗತ್ಯತೆಗಳ ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಸಹ ಅವಲಂಬಿಸಿದೆ. ಸಂಪನ್ಮೂಲಗಳ ಕ್ರೋಢಿಕರಣ ಹಾಗೂ ಹಣಕಾಸಿನ ಇತಿಮಿತಿಗಳನ್ನು ಒಳಗೊಂಡಿದೆ ಎಂದು ಆರ್.ಅಶೋಕ ತಿಳಿಸಿದ್ದಾರೆ.
ಆದರೆ, ಇಂಡಿ ಜಿಲ್ಲೆಯಲ್ಲಿಯೇ ಎರಡನೇ ಅತೀ ದೊಡ್ಡ ತಾಲೂಕು ಆಗಿದ್ದು 50 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇಂಡಿ, ಸಿಂದಗಿ, ಆಲಮೇಲ, ಚಡಚಣ, ದೇವರಹಿಪ್ಪರಗಿ ತಾಲೂಕುಗಳನ್ನು ವಿಜಯಪುರದಿಂದ ಬೇರ್ಪಡಿಸಿ ಇಂಡಿ ಜಿಲ್ಲಾ ಕೇಂದ್ರ ಮಾಡಿದರೆ ಆಡಳಿತ ಮತ್ತು ಅಭಿವೃದ್ಧಿ ದೃಷ್ಠಿಯಿಂದ ಅನುಕೂಲವಲ್ಲವೇ? ಎಂಬ ಶಾಸಕ ಯಶವಂತರಾಯಗೌಡ ಪಾಟೀಲರ ಪ್ರಶ್ನೆಗೆ ಸರ್ಕಾರದ ಬಳಿ ಸಮರ್ಪಕ ಉತ್ತರವಿಲ್ಲ.

error: Content is protected !!