ಶ್ರೀಶೈಲದಲ್ಲಿ ಮತ್ತೆ ಪುಂಡಾಟಿಕೆ, ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ…!
ವಿಜಯಪುರ: ಕಳೆದ ಮಾರ್ಚ್ 31 ರಂದು ಯುಗಾದಿ ಸಂದರ್ಭ ಶ್ರೀಶೈಲದಲ್ಲಿ ನಡೆದ ಭಕ್ತರ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಪ್ರಕರಣ ಮರುಕಳಿಸಿದೆ.
ಜೂ.2 ರಂದು ಮಧ್ಯರಾತ್ರಿ ಕರ್ನಾಟಕದ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ದಾಳಿ ನಡೆದಿದೆ.
ವಿಜಯಪುರ ಡಿಪೋದ ಬಸ್ ಚಾಲಕ ಬಸವರಾಜ ಬಿರಾದಾರ ಮೇಲೆ ಹಲ್ಲೆ ನಡೆದಿದೆ.
ಬಸ್ ಕಿಟಕಿ ಗಾಜು ಒಡೆದು ಚಾಲಕ ಹಾಗೂ ನಿರ್ವಾಹಕನ ಮೇಲೆ ದಾಳಿ ನಡೆಸಲಾಗಿದೆ.
ಶ್ರೀಶೈಲ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿ ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದಾಗ ಏಕಾಏಕಿ ಬಂದ ಪುಂಡರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಕನ್ನಡಿಗರ ಬಗ್ಗೆ ಆಶ್ಲೀಲ ಪದ ಬಳಸಿ 10-12 ಜನರಿರುವ ತಂಡವೊಂದು ಹಲ್ಲೆ ಮಾಡಿದ್ದಾರೆ.
ಚಾಲಕನ ಮುಖ ಹಾಗೂ ಕಾಲಿನ ಭಾಗಕ್ಕೆ ಹೊಡೆಯಲಾಗಿದೆ. ತೀವ್ರ ರಕ್ತ ಸ್ರಾವವಾಗಿ ಚಾಲಕ ಬಸವರಾಜ ಚೀರಾಡುತ್ತಿದ್ದಂತೆ ಇತರೆ ಚಾಲಕರು ಹಾಗೂ ನಿರ್ವಾಹಕರು ಓಡಿ ಬರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆಂದು ತಿಳಿದು ಬಂದಿದೆ.
ಯುಗಾದಿ ವೇಳೆ ನಡೆದಿತ್ತು ಹಲ್ಲೆ:
ಕಳೆದ ಯುಗಾದಿ ಸಂದರ್ಭದಲ್ಲಿ ನಡೆದ ಜಾತ್ರೆ ವೇಳೆಯೂ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು.
ಮಾರ್ಚ್ 31 ರಂದು ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗಿ ಕರ್ನಾಟಕದ ವಾಹನಗಳ ಗಾಜು ಒಡೆದು ಹಾಕಲಾಗಿತ್ತು.
ಇದೀಗ ಮತ್ತೆ ಕ್ಯಾತೆ ತೆಗೆದಿದ್ದು ಭಕ್ತರ ಹಾಗೂ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಾರ್ಚ್ 31 ರಂದು ನೀರಿನ ವಿಚಾರವಾಗಿ ಬಾಗಲಕೋಟೆ ಮೂಲದ ಶ್ರೀಶೈಲ್ ವಾರಿಮಠ ಎಂಬ ಯುವಕನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆ ಮಾಸುವ ಮುಂಚೆಯೇ ಮತ್ತೊಂದು ಮಾರಣಾಂತಿಕ ಹಲ್ಲೆಯ ಘಟನೆ ನಡೆದಿರುವುದು ಶ್ರೀಶೈಲದಲ್ಲಿ ಕನ್ನಡಿಗರಿಗೆ ಸುರಕ್ಷತೆ ಬಗ್ಗೆ ಸಂಶಯ ಮೂಡಿಸುತ್ತಿದೆ. ಇದೊಂದು
ಉದ್ದೇಶ ಪೂರ್ವಕವಾಗಿ ನಡೆದಿರೋ ಹಲ್ಲೆ ಎನ್ನಲಾಗುತ್ತಿದೆ.