ಹಿಂದುತ್ವ ತಿಳಿಯಲು ಗೂಗಲ್ ನೋಡಬೇಡಿ, ಧ್ಯಾನದಿಂದ ಅಧ್ಯಯನ ಮಾಡಿ, ಸತೀಶ ಜಾರಕಿಹೊಳಿಗೆ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ
ಸರಕಾರ್ ನ್ಯೂಸ್ ಇಂಡಿ
ಹಿಂದುತ್ವ ತಿಳಿಯಲು ಧ್ಯಾನದಿಂದ ಅಧ್ಯಯನ ಮಾಡಿ. ಅದನ್ನು ಬಿಟ್ಟು ಗೂಗಲ್, ಟ್ವೀಟರ್ ನೋಡಬೇಡಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಪ್ರತಿಕ್ರಿಯಿಸಿದರು.
‘ಹಿಂದೂ ಪದ ಪರ್ಶಿಯನ್ ಭಾಷೆಯಿಂದ ಬಂದಿದ್ದು, ಅದೊಂದು ಅಶ್ಲೀಲ ಪದ, ಈ ಬಗ್ಗೆ ಚರ್ಚೆಯಾಗಬೇಕು’ ಎಂದಿರುವ ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ ಹೇಳಿಕೆಗೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಇಂಡಿ ಹಾಗೂ ಸಿಂದಗಿ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ಅಂಗವಾಗಿ ಜಿಲ್ಲೆಗೆ ಆಗಮಿಸಿದ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ನಾಯಕರು ಪದೇ ಪದೇ ಹಿಂದುತ್ವದ ಬಗ್ಗೆ ಯಾಕೆ ಅಪಮಾನ ಮಾಡುತ್ತಿದ್ದಾರೋ ಗೊತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿದ್ದು, ಇದೀಗ ಸತೀಶ ಜಾರಕಿಹೊಳಿ ಹೇಳಿಕೆ ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತಾಗಿದೆ ಎಂದರು.
ಹಿಂದೂ ಎಂಬುದು ನಮ್ಮ ಸಂಸ್ಕೃತಿ. ಅದರ ಬಗ್ಗೆ ನಮಗೆ ಗರ್ವ ಇದೆ. ಇಡೀ ದೇಶವಾಸಿಗಳ ಗರ್ವವಾಗಿದೆ. ಕಾಂಗ್ರೆಸ್ ನಾಯಕರು ಪದೇ ಪದೇ ಹಿಂದುತ್ವದ ಬಗ್ಗೆ ಯಾಕೆ ಅಪಮಾನ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ. ರಾಹುಲ್ ಗಾಂಧಿ ಸಹ ಈ ಭಾಗಕ್ಕೆ ಬಂದು ಹೋದರು. ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ಸಹ ಜೊತೆಗಿದ್ದರು. ಅವರು ಯಾವ ರೀತಿ ಗಮನ ನೀಡಿದರು ಗೊತ್ತಾಗಲಿಲ್ಲ. ಸತೀಶ ಜಾರಕಿಹೊಳಿ ವರ್ಕಿಂಗ್ ಪ್ರೆಸಿಡೆಂಟ್ ಆಗಿದ್ದುಕೊಂಡು ಹೀಗೆ ಮಾತನಾಡುತ್ತಾರೆಂದರೆ ಅದು ವಿನೇಶ ಕಾಲೇ ವಿಪರೀತ ಬುದ್ದಿ ಎಂಬಂತಾಗಿದೆ ಎಂದರು.
ರಾಹುಲ್ ಗಾಂಧಿ ಹಿಂದು, ಹಿಂದುತ್ವವಾದಿ ವಿಚಾರದಲ್ಲಿ ಬೇರೆ ಬೇರೆ ವ್ಯಾಖ್ಯಾನ ನೀಡುತ್ತಾರೆ. ತಾವೆಲ್ಲ ನಮ್ಮ ಆಧ್ಯಾತ್ಮ, ನಮ್ಮ ಸಿದ್ದಾಂತವನ್ನು ಅಧ್ಯಯನ ಮಾಡಿ. ವಾಟ್ಸಪ್, ಗೂಗಲ್ ನೋಡಬೇಡಿ. ಕಾಂಗ್ರೆಸ್‌ನ ಎಲ್ಲ ನಾಯಕರು ನಮ್ಮ ವೇದ, ಪುರಾಣ ಅಧ್ಯಯನ ಮಾಡಿ. ಬಸವಣ್ಣನವರ ವಚನಗಳನ್ನೂ ಅಧ್ಯಯನ ಮಾಡಬೇಕು. ಅದನ್ನು ಬಿಟ್ಟು ನಿಂದನೆ ಮಾಡುವುದು ಸರಿಯಲ್ಲ ಎಂದರು.