ನಮ್ಮ ವಿಜಯಪುರ

ಶಾಸಕ ಯತ್ನಾಳ-ಅರುಣ ಸಿಂಗ್‌ ರಹಸ್ಯ ಮಾತುಕತೆ…..ಅಚ್ಚರಿ ಮೂಡಿಸಿದ ಸಭೆ !

ಸರಕಾರ್‌ ನ್ಯೂಸ್‌ ವಿಜಯಪುರ

ಇತ್ತೀಚೆಗಷ್ಟೇ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬಗ್ಗೆ ಕೇವಲವಾಗಿ ಮಾತನಾಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌ ಇದೀಗ ಯತ್ನಾಳರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ನಗರ ಹೊರವಲಯದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಹೈಪರ್‌ ಮಾರ್ಟ್‌ನಲ್ಲಿ ಮಂಗಳವಾರ ಸಂಜೆ ಮಾತು ಕತೆ ನಡೆಯಿತು. ಪಕ್ಷದ ಆಗು ಹೋಗುಗಳ ಬಗ್ಗೆ ಹಾಗೂ ಮುಂದಿನ ಚುನಾವಣೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆಯಾದರೂ ಈ ಬಗ್ಗೆ ಉಭಯ ನಾಯಕರು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇತ್ತೀಚೆಗಷ್ಟೇ ಅರುಣ ಸಿಂಗ್‌ ಯತ್ನಾಳರ ವಿಷಯದಲ್ಲಿ “ಯತ್ನಾಳ ರಾಜ್ಯನಾಯಕರಾ? ಅವರೊಬ್ಬ ಕೇವಲ ಶಾಸಕರಷ್ಟೇʼʼ ಎಂದಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಕೂಡ ಆಗಿತ್ತು. ಇದೀಗ ಪರಸ್ಪರ ಮುಖಾಮುಖಿಗೊಂಡಿದ್ದಷ್ಟೇ ಅಲ್ಲದೇ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಯಿತು.

ಸಿಂದಗಿ ಹಾಗೂ ಇಂಡಿ ವಿಧಾನ ಸಭೆ ಕ್ಷೇತ್ರದ ಕಾರ್ಯಕರ್ತರ ಸಂಕಲ್ಪ ಸಭೆ ಬಳಿಕ ಅರುಣ ಸಿಂಗ್‌ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದು, ಸಹಜವಾಗಿಯೇ ಪಕ್ಷದ ಕಚೇರಿಗೆ ಆಗಮಿಸುವರೆಂದು ನಿರೀಕ್ಷಿಸಲಾಗಿತ್ತು. ಆದರೆ, ಹೈಪರ್‌ ಮಾರ್ಟ್‌ಗೆ ತೆರಳಿ ಶಾಸಕ ಯತ್ನಾಳರೊಂದಿಗೆ ಸಭೆ ನಡೆಸಿರುವುದು ಕೂಡ ಚರ್ಚೆಗೆ ಕಾರಣವಾಯಿತು.

ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಸೇರಿದಂತೆ ಮಹಾನಗರ ಪಾಲಿಕೆಯ ನೂತನ ಸದಸ್ಯರಾದ ಶಿವರುದ್ರ ಬಾಗಲಕೋಟ ಮತ್ತಿತರರು ಉಪಸ್ಥಿತರಿದ್ದರು.

ಶಾಸಕರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ ಅರುಣ ಸಿಂಗ್‌ ಆ ಬಳಿಕ ನೂತನ ಸದಸ್ಯರಿಗೆ ಸಲಹೆ ಸೂಚನೆ ನೀಡಿ ನಿರ್ಗಮಿಸಿದರು ಎಂದು ಸಭೆಯಲ್ಲಿ ಸದಸ್ಯರು ತಿಳಿಸಿದರು.

(ಕ್ಷಣ ಕ್ಷಣದ ಮಾಹಿತಿಗಾಗಿ ಬಲಬದಿಗಿರುವ ಬೆಲ್‌ ಬಟನ್‌ ಒತ್ತುವ ಮೂಲಕ ಸಬ್‌ ಸ್ಕ್ರೈಬ್‌ ಆಗಿ)

error: Content is protected !!