ತಳವಾರ ಎಸ್‌ಟಿ ಪ್ರಮಾಣ ಪತ್ರದ ವಿಚಾರಕ್ಕೆ ಜಟಾಪಟಿ, ಸುನೀಲಗೌಡ-ವಿಜುಗೌಡ ಮಧ್ಯೆ ಮಾತಿನ ಚಕಮಕಿ
ಸರಕಾರ್ ನ್ಯೂಸ್ ಬಬಲೇಶ್ವರ
ತಳವಾರ ಮತ್ತು ಪರಿವಾರ ಸಮುದಾಯದ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಬ್ಬರ ಮಧ್ಯೆ ತೀವ್ರ ಜಟಾಪಟಿ ನಡೆಯಿತು.
ಬಬಲೇಶ್ವರದ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಬೆಳಗ್ಗೆ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಎಸ್‌ಟಿ ಪ್ರಮಾಣ ಪತ್ರ ವಿತರಿಸುವ ವಿಚಾರದಲ್ಲಿ ಗಲಾಟೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹಾಗೂ ಕರ್ನಾಟಕ ರಾಜ್ಯ ಬೀಜ ಮತ್ತುಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮಧ್ಯೆ ವಾಕ್ಸಮರ ನಡೆಯಿತು.
ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದು, ನೆರೆದ ಜನರ ಮುಂದೆ ಆಕ್ರೋಶ ಭರಿತ ನುಡಿಗಳನ್ನಾಡಿದ್ದಾರೆ. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಮ್ಮುಖದಲ್ಲಿಯೇ ಈ ಗಲಾಟೆ ನಡೆದಿರುವುದು ವಿಶೇಷ.
ಏನಿದು ಗಲಾಟೆ?
ಬುಧವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತನ್ನಿಮಿತ್ತ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಬಬಲೇಶ್ವರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ತಳವಾರ ಸಮಾಜದ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಕ್ಕಾಗಿ ನೂರಾರು ಅರ್ಜಿ ಸಲ್ಲಿಸಲಾಗಿದ್ದು, ದಾಖಲಾತಿ ಪರಿಶೀಲಿಸಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅರ್ಜಿದಾರರಿಗೆ ಪ್ರಮಾಣ ಪತ್ರ ನೀಡಲು ಮುಂದಾದರು. ಈ ವೇಳೆ ವಿಜುಗೌಡ ಪಾಟೀಲರು ಕೆಲವೇ ಕೆಲವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಬೇಕಿಲ್ಲ. ಎಲ್ಲರಿಗೂ ಅವಕಾಶ ನೀಡಬೇಕು. ನೂರು ಅರ್ಜಿ ಇರಲಿ, ಸಾವಿರ ಇರಲಿ ಎಲ್ಲರಿಗೂ ಎಸ್‌ಟಿ ಪ್ರಮಾಣ ಪತ್ರ ಸಿಗಬೇಕೆಂದರು. ಈ ವೇಳೆ ಸುನೀಲಗೌಡ ಪಾಟೀಲರು ಮಾತನಾಡುತ್ತಾ, ‘ಶಾಸಕರು ನಿನ್ನೆಯೇ ಕೆಡಿಪಿ ಸಭೆ ನಡೆಸಿದ್ದು ಎಲ್ಲರಿಗೂ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಸೂಚಿಸಿದ್ದಾರೆ’ ಎಂದರು. ಕೂಡಲೇ ಪ್ರತಿಕ್ರಿಯಿಸಿದ ವಿಜುಗೌಡರು, ‘ಇದಕ್ಕೂ ಮೊದಲೇ ಮುಖ್ಯಮಂತ್ರಿಗಳು ಕಲಬುರಗಿ ಸಮಾವೇಶದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ’ ಎಂದರು. ಹೀಗೆ ಪರಸ್ಪರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಕಪಕ್ಕೆ ತಲುಪಿತು.
ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದು ಬಿಜೆಪಿ ಸರ್ಕಾರ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದಲ್ಲದೇ ರಾಜ್ಯ ಸರ್ಕಾರ ಪ್ರವರ್ಗ -1 ರಿಂದ ತೆಗೆದು ಹಾಕಿ ಎಸ್‌ಟಿ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದೆ. ಕಾಂಗ್ರೆಸ್ ಸರ್ಕಾರ ತಳವಾರ ಸಮುದಾಯವನ್ನು ಕಡೆಗಣಿಸಿತ್ತು. ಇದೀಗ ಬಿಜೆಪಿ ಸರ್ಕಾರ ನ್ಯಾಯ ಒದಗಿಸಿದೆ. ಅಧಿಕಾರಿಗಳು ವಿನಾಕಾರಣ ತೊಂದರೆ ಮಾಡದೇ ಸಮುದಾಯಕ್ಕೆ ಪ್ರಮಾಣ ಪತ್ರ ನೀಡಬೇಕು. ಈ ಬಗ್ಗೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದರು. ಸುನೀಲಗೌಡರು ಮಾತನಾಡುತ್ತಾ, ಈ ಹಿಂದೆ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲರು ಕೂಡ ಶ್ರಮಿಸಿದ್ದಾರೆ ಎಂದರು.