ಶೀಲ ಶಂಕಿಸಿ ಪತ್ನಿಯ ಕೊಲೆ, ಸುತ್ತಿಗೆಯಿಂದ ತಲೆಗೆ ಹೊಡೆದಿದ್ದ ಪತಿ, ನ್ಯಾಯಲಯದಿಂದ ಜೀವಾವಧಿ ಶಿಕ್ಷೆ ಪ್ರಕಟ
ಸರಕಾರ ನ್ಯೂಸ್ ವಿಜಯಪುರ
ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.
ವಿಜಯಪುರದ ಕಾಸಗೇರಿ ಓಣಿಯ ಮಲ್ಲಿಕಾರ್ಜುನ ಮಹಾದೇವ ಪವಾರ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ತನ್ನ ಪತ್ನಿ ಸೋನಾಬಾಯಿಯನ್ನು ಕೊಲೆ ಮಾಡಿದ್ದನು.
ಸೋನಾಬಾಯಿ ತಮ್ಮ ಸಂಬಂಧಿಕ ಚಿಕ್ಕಪ್ಪನ ಮಗನಾದ ಚಂದ್ರಶೇಖರ ಶರಣಪ್ಪ ರಾಠೋಡ ಈತನ ಕೂಡ ಅನೈತಿಕ ಸಂಬಂಧ ಹೊಂಧಿದ್ದು, ಅವರ ಕೂಡ ಮಾತನಾಡಬೇಡ ಎಂದರೂ ಸೋನಾಬಾಯಿ ಮಾತನಾಡುವುದು ಬಿಡುತ್ತಿಲ್ಲ ಎಂದು ಮಲ್ಲಿಕಾರ್ಜುನ ತಂಟೆ ತಕರಾರು ತೆಗೆಯುತ್ತಿದ್ದನು. ಹಿರಿಯರೆಲ್ಲ ಸೇರಿ ನ್ಯಾಯ ಪಂಚಾಯಿತಿ ಮಾಡಿ ಹಾಗೆಲ್ಲ ಸಂಶಯ ಪಡಬೇಡ ಎಂದರೂ ಕೇಳದೆ ಆಕೆಯನ್ನು ಕೊಲೆ ಮಾಡಿಯೇ ಬಿಡುತ್ತೇನೆ ಎಂದಿದ್ದನು.
2019 ಮಾ.5ರಂದು ಸೋನಾಬಾಯಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದನು. ಈ ಬಗ್ಗೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಆರೀಫ್ ಎಂ. ಮುಶಾಪುರ ಹಾಗೂ ಸಿಪಿಐ ಕಪಿಲದೇವ ಎ.ಗಡದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆಪಾದನಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರ ಕೈಗೆತ್ತಿಕೊಂಡ ನ್ಯಾಯಾಧೀಶ ಸುಭಾಶ ಸಂಕದ ಮಲ್ಲಿಕಾರ್ಜುನನಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಡಿ. ಬಾಗವಾನ ವಾದ ಮಂಡಿಸಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)