ತವರಿಗೆ ಬಂಪರ್ ಗಿಫ್ಟ್ ಕೊಡಲು ಸಚಿವ ಶಿವಾನಂದ ದಿಟ್ಟ ಹೆಜ್ಜೆ, ಮುಳವಾಡದಲ್ಲಿ ಹೂಡಿಕೆಗೆ ಹಾಂಕಾಂಗ್ ಕಂಪನಿ ಆಸಕ್ತಿ, ಅಬ್ಬಬ್ಬಾ ಎಷ್ಟೊಂದು ಉದ್ಯೋಗ ಸೃಷ್ಠಿಯಾಗಲಿದೆ ಗೊತ್ತಾ?
ಸರಕಾರ ನ್ಯೂಸ್ ವಿಜಯಪುರ
ಜಿಲ್ಲೆಯ ಮುಳವಾಡ ಕೆ ಐ ಎ ಡಿ ಬಿ ಕೈಗಾರಿಕಾ ಪ್ರದೇಶದಲ್ಲಿ ಹಾಂಕಾಂಗ್ ಮೂಲದ ಜವಳಿ ಮತ್ತು ಸಿದ್ಧ ಉಡುಪು ಉತ್ಪಾದನಾ ಕಂಪೆನಿ ಟಾಲ್ ಅಪಾರೆಲ್ಸ್ 700-800ಕೋಟಿ ರೂ. ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದೆ.
ಜವಳಿ ಖಾತೆ ಸಚಿವರಾದ ಶಿವಾನಂದ ಪಾಟೀಲ್ ಅವರನ್ನು ಬೆಂಗಳೂರಿನಲ್ಲಿ ಜುಲೈ 7 ರಂದು ಭೇಟಿ ಮಾಡಿ ರಾಜ್ಯದಲ್ಲಿ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಚರ್ಚಿಸಿ ಮಾಹಿತಿ ಪಡೆದಿದ್ದ ಟಾಲ್ ಅಪಾರೆಲ್ಸ್ ನ ನಿರ್ದೇಶಕ, ಇತಾನ್ ಯಾಂಗ್ ಇಂದು ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಜವಳಿ ಇಲಾಖೆ ಆಯುಕ್ತ ಟಿಎಚ್ಎಮ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ವಿಜಯ್ ಮಹಂತೇಶ್ ಜತೆಯಲ್ಲಿದ್ದು ಮಾಹಿತಿ ನೀಡಿದರು.
ಬೆಂಗಳೂರಿನ ಭೇಟಿ ಸಂದರ್ಭದಲ್ಲಿ ಸಚಿವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜವಳಿ ಆಯುಕ್ತ ಟಿಎಚ್ ಎಂ ಕುಮಾರ್ ಹಾಗು ಕೆಐಎಡಿಬಿಯ ಸಿಇಒ ಡಾ.ಮಹೇಶ್ ಅವರು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಲಭ್ಯವಿರುವ ಪ್ರೋತ್ಸಾಹಧನ ಮತ್ತು ರಿಯಾಯಿತಿ ಗಳ ಕುರಿತು ವಿಸ್ತ್ರತ ಪ್ರಾತ್ಯಕ್ಷಿಕೆ ನೀಡಿದ್ದರು.
ಸಚಿವ ಶಿವಾನಂದ ಪಾಟೀಲರ ಸ್ವಕ್ಷೇತ್ರ ಬಸವನಬಾಗೇವಾಡಿ ವ್ಯಾಪ್ತಿಯಲ್ಲಿ ಬರುವ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಟಾಲ್ ಅಪಾರೆಲ್ಸ್ ಜವಳಿ ಮತ್ತು ಸಿದ್ಧ ಉಡುಪು ಘಟಕ ಕಾರ್ಯರಂಭಿಸಿದರೆ ಐದರಿಂದ ಆರು ಸಾವಿರ ಮಂದಿಗೆ ಉದ್ಯೋಗ ದೊರಕುವ ನಿರೀಕ್ಷೆಯಿದೆ. ಶಿವಾನಂದ ಪಾಟೀಲರು ಸಚಿವರಾದ ಕೆಲವೇ ದಿನಗಳಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.