ಫೇಸ್‌ಬುಕ್ ಗೆಳತಿ ನಂಬಿ ಕೆಟ್ಟ, 40 ಲಕ್ಷ ರೂಪಾಯಿ ಕೊಟ್ಟ ! ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ…!
ಸರಕಾರ್ ನ್ಯೂಸ್ ವಿಜಯಪುರ
ಮುಖ ನೋಡಿಲ್ಲ, ಭೇಟಿಯಾಗಿಲ್ಲ, ಪರಸ್ಪರ ಮಾತನಾಡಿಲ್ಲ, ಆದರೂ ಹುಡುಗಿಯನ್ನು ನಂಬಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿಸಿಕೊಂಡ ಉದ್ಯೋಗಿಯೋರ್ವ ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ !
ಯಾರಪ್ಪಾ ಅಂಥ ಭೂಪ ಅಂತೀರಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬಾತ ಫೇಸ್‌ಬುಕ್ ಗೆಳತಿಯನ್ನು ನಂಬಿ ಹಣ ಕಳೆದುಕೊಂಡ ಉದ್ಯೋಗಿ. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಆದಿತ್ಯ ನಗರದ ಆದಿಬಟ್ಟಲ ಗ್ರಾಮದಲ್ಲಿರುವ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪರಮೇಶ್ವರ 39,04,870 ರೂಪಾಯಿ ಕಳೆದುಕೊಂಡಿದ್ದಾನೆ.
ಘಟನೆ ಸ್ವಾರಸ್ಯ:
ಸಿಂದಗಿಯಲ್ಲಿದ್ದ ಪರಮೇಶ್ವರಗೆ 2022 ಜೂ. 29ರಂದು ಬೆಳಗ್ಗೆ 9.10ಕ್ಕೆ ಮಂಜುಳಾ ಕೆ.ಆರ್. ಎಂಬ ಫೇಸ್‌ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಅದನ್ನು ಕನ್‌ಫರ್ಮ್ ಮಾಡಲಾಗಿ ಮೆಸೆಂಜರ್‌ನಲ್ಲಿ ‘ಹೈʼ ಎಂಬ ರಿಪ್ಲಾಯ ಬರುತ್ತದೆ. ಆ ಬಳಿಕ ಪರಸ್ಪರ ಮೆಸೇಜ್ ಮಾಡುತ್ತಾ ಬರುತ್ತಾರೆ. ಆರಂಭದಲ್ಲಿ ಮಂಜುಳಾ ಕೆ.ಆರ್ ಇವಳು ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು 700 ರೂಪಾಯಿ ಕೇಳಿದಾಗ ಪರಮೇಶ್ವರ ಫೋನ್ ಪೇ ಮಾಡುತ್ತಾನೆ. ಬಳಿಕ ಮರಣ ಹೊಂದಿದ್ದಾಳೆಂದು, ತಿಥಿ ಕಾರ್ಯಕ್ಕೆಂದು ಹಣ ಕೇಳಿದಾಗ ಪರಮೇಶ್ವರ ಫೋನ್ ಪೇ ಮಾಡುತ್ತಾನೆ. ಆರಂಭದಲ್ಲಿ ಸಾವಿರಾರು ರೂಪಾಯಿಗೆ ಸೀಮಿತವಾಗಿದ್ದ ವಹಿವಾಟು ಬಳಿಕ ಲಕ್ಷಾಂತರ ರೂಪಾಯಿಗೆ ತಿರುಗುತ್ತದೆ.
ಮದುವೆಯ ಭರವಸೆ:
ತಾನು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಡಿಸಿ ಪೋಸ್ಟ್ ಸಿಗುತ್ತದೆ. ಸದ್ಯ ಹಾಸನದಲ್ಲಿದ್ದು ನನಗೆ ನೋಡಿಕೊಳ್ಳುವವರು ಯಾರೂ ಇಲ್ಲ. ಅದಕ್ಕೆ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಖರ್ಚಿಗೆ ಹಣ ಇಲ್ಲ. ಹಣಕಾಸಿನ ಸಹಾಯ ಮಾಡಿದರೆ ಮದುವೆಯಾಗುತ್ತೇನೆಂದು ಮಂಜುಳಾ ಪರಮೇಶ್ವರಗೆ ಹೇಳಿದಾಗ ಒಮ್ಮೆ 20 ಸಾವಿರ ಮತ್ತೊಮ್ಮೆ 30 ಸಾವಿರ ರೂಪಾಯಿ ಕೊಡುತ್ತಾನೆ. ಕೆಲವು ದಿನಗಳ ಬಳಿಕ ಮಂಜುಳಾ ಮತ್ತಷ್ಟು ಸಲುಗೆಯಿಂದ ನಡೆದುಕೊಂಡಿದ್ದು ಅದನ್ನು ನಂಬಿದ ಪರಮೇಶ್ವರ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 40,86,800 ರೂಪಾಯಿಗಳನ್ನು ಮಂಜುಳಾ ಖಾತೆಗೆ ಹಾಕಿದ್ದಾನೆ. ಫೋನ್ ಪೇ ಹಣ ಸೇರಿ ಒಟ್ಟು 41,26,800 ರೂ. ಮಂಜುಳಾಗೆ ನೀಡಿದ್ದು ಅದರಲ್ಲಿ 2,21,930 ರೂ. ವಾಪಸ್ ಪಡೆದಿದ್ದಾನೆ. ಮತ್ತೆ ಹಣಕ್ಕೆ ಬೇಡಿಕೆ ಇರಿಸಿದಾಗ ಮೋಸದ ಅರಿವಾಗಿ ಇದೀಗ ಅಂದರೆ ನ.15ರಂದು ಆಕೆಯ ಮೇಲೆ ಪರಮೇಶ್ವರ ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಜುಳಾ ಪತ್ತೆಗೆ ಜಾಲ ಬೀಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್‌ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)