ತಹಸೀಲ್ದಾರ್- ತಳವಾರ ಸಮಾಜದ ಮಧ್ಯೆ ಕಾನೂನು ಸಮರ, ಪರಸ್ಪರ ಪೊಲೀಸ್ ಪ್ರಕರಣ ದಾಖಲು !
ಸರಕಾರ್ ನ್ಯೂಸ್ ಯಾದಗಿರಿ
ತಳವಾರ ಮತ್ತು ಪರಿವಾರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಆ ಪ್ರಕಾರ ರಾಜ್ಯಾದ್ಯಂತ ದಾಖಲಾತಿ ಆಧರಿಸಿ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದರೂ ಇಲ್ಲೋರ್ವ ಅಧಿಕಾರಿ ಮಾತ್ರ ತನಗೆ ಇನ್ನೂ ಯಾವುದೇ ಆದೇಶ ತಲುಪಿಲ್ಲವೆಂದು ತಗಾದೆ ತೆಗೆಯುತ್ತಿದ್ದಾರೆ !
ಅಷ್ಟೇ ಅಲ್ಲ ದಾಖಲಾತಿ ಆಧರಿಸಿ ತಳವಾರ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಿದ್ದರೂ ಇದೀಗ ತಮಗೆ ಬೆದರಿಕೆ ಹಾಕಿ ಎಸ್‌ಟಿ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿದ್ದಾರೆಂದು ಎಫ್ ಐಆರ್ ದಾಖಲಿಸಿದ್ದಾರೆ. ಆದರೆ, ನ್ಯಾಯೋಚಿತ ದಾಖಲೆಯಾಧಾರದ ಮೇಲೆ ಎಸ್‌ಟಿ ಪ್ರಮಾಣ ಪತ್ರ ಪಡೆದ ತಳವಾರ ಸಮಾಜ ಇದೀಗ ತಹಸೀಲ್ದಾರ್ ನಡೆಗೆ ಬೇಸತ್ತು ಪ್ರತಿ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಸುರಪುರ ತಾಲೂಕಿನ ಗ್ರೇಡ್ -2 ತಹಸೀಲ್ದಾರ್ ಮಲ್ಲಯ್ಯ ಈಗಾಗಲೇ ತಳವಾರ ಸಮಾಜದ ದಾಖಲೆಗಳನ್ನು ಪರಿಶೀಲಿಸಿ ಎಸ್‌ಟಿ ಪ್ರಮಾಣ ಪತ್ರ ನೀಡಿದ್ದಾರೆ. ನ.21ರಂದು ಸಂಜೆ 15-20 ಜನ ಪರಿವಾರ ಮತ್ತು ತಳವಾರ ಸಮಾಜದ ದೇವೀಂದ್ರಪ್ಪಗೌಡ ಮಾಲಿ ಪಾಟೀಲ, ವೆಂಕಟೇಶ, ರಮೇಶಗೌಡ ಗುತ್ತೇದಾರ, ದೊಡ್ಡಪ್ಪಗೌಡ ನಾಟೀಕಾರ, ಹೊನ್ನಪ್ಪಗೌಡ ಹಸನಾಪುರ ಹಾಗೂ ಇತರ ಇನ್ನೂ 15-20 ಜನ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪರಿವಾರ ಮತ್ತು ತಳವಾರ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿದರು ಎಂದು ತಹಸೀಲ್ದಾರ್ ಮಲ್ಲಯ್ಯ ದೂರಿನಲ್ಲಿ ತಿಳಿಸಿದ್ದಾರೆ. ಹಾಗೆ ತಿಳಿಸುವಾಗಲೇ ಪರಿವಾರ ಮತ್ತು ತಳವಾರ ಸಮುದಾಯದ ಎಂದು ತಿಳಿಸುತ್ತಲೇ ಮುಖಂಡರ ಹೆಸರು ನಮೂದಿಸುತ್ತಾರೆ. ಮುಂದುವರಿದು ತಮಗೆ ಸರ್ಕಾರದ ಸುತ್ತೋಲೆ ಮತ್ತು ಆದೇಶ ಬಂದಿಲ್ಲ. ಆದ್ದರಿಂದ ನಾನು ಪ್ರಮಾಣ ಪತ್ರ ನೀಡಲು ಬರುವುದಿಲ್ಲ ಎಂದು ತಿಳಿಸಿದ್ದರೂ ಜೀವ ಬೆದರಿಕೆ ಹಾಕಿ ಪ್ರಮಾಣ ಪತ್ರ ಬಡೆದಿದ್ದಾಗಿ ನಮೂದಿಸುತ್ತಾರೆ. ಹಾಗಾದರೆ, ಈ ತಳವಾರ ಮತ್ತು ಪರಿವಾರ ಸಮಾಜದ ಮುಖಂಡರಿಗೆ ಯಾವ ಪ್ರಮಾಣ ಪತ್ರ ನೀಡಬೇಕಿತ್ತು? ಸರ್ಕಾರದ ಆದೇಶ ಮಲ್ಲಯ್ಯ ಅವರಿಗೆ ಪ್ರತ್ಯೇಕವಾಗಿ ಮನೆಗೆ ತಲುಪಿಸಬೇಕಿತ್ತೇ? ಎಂಬುದು ಆ ಸಮುದಾಯದವರ ಮರುಪ್ರಶ್ನೆ.
ಪ್ರತಿ ದೂರು:
ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ವರ್ತನೆಗೆ ಬೇಸತ್ತ ತಳವಾರ ಮತ್ತು ಪರಿವಾರ ಸಮಾಜದ ಮುಖಂಡರು ಶೋರಾಪುರ (ಸುರಪುರ) ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕಲಬುರಗಿಯ ಸಮಾವೇಶದಲ್ಲಿಯೇ ಅಧಿಕೃತ ದಾಖಲೆಗಳೊಂದಿಗೆ ತಳವಾರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಿದ್ದಲ್ಲದೇ ಪ್ರವರ್ಗ-1ರಿಂದ ಅಳಿಸಿ ಹಾಕಲಾಗಿದೆ ಎಂದು ಗಂಟಾಘೋಷವಾಗಿ ಸಾರಿದ್ದಾರೆ. ಅಂಥದರಲ್ಲಿ ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ಮಾತ್ರ ಇನ್ನೂ ತಮಗೆ ಯಾವುದೇ ಸುತ್ತೋಲೆ ಹಾಗೂ ಆದೇಶ ಬಂದಿಲ್ಲ ಎನ್ನುತ್ತಿರುವುದು ಹಾಸ್ಯಾಸ್ಪದ. ಮಾತ್ರವಲ್ಲ, ಶೋಷಿತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ. ಈ ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ಹಾಗೂ ತಳವಾರ ಮತ್ತು ಪರಿವಾರ ಸಮಾಜದ ಮಧ್ಯೆ ಕಾನೂನು ಸಮರ ಮುಂದುವರಿದಿದ್ದು ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)