ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಅಕ್ರಮ, ನಕಲಿ ಖಾತೆ ಸೃಷ್ಠಿಸಿ ಹಣ ದುರ್ಬಳಕೆ, ತನಿಖೆಯಲ್ಲಿ ಹೊರಬಿದ್ದ ಸತ್ಯ ಏನು ಗೊತ್ತಾ?
ಸರಕಾರ ನ್ಯೂಸ್ ಶಹಾಪುರ
ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ನಡೆದಿರುವ ಪ್ರಕರಣ ಆಂತರಿಕ ತನಿಖೆಯಿಂದ ತಿಳಿದು ಬಂದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೊರನಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಇದೀಗ ಅಧಿಕಾರಿಗಳ ಆಂತರಿಕ ತನಿಖೆ ವೇಳೆ ಅವ್ಯವಹಾರ ಬಯಲಾಗಿದೆ.
ಗ್ರಾಹಕರ ಗುರುತಿನ ಚೀಟಿ ಬಳಸಿಕೊಂಡು ನಕಲಿ ಖಾತೆ ಸೃಷ್ಠಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದು, ಕೃತ್ಯದಲ್ಲಿ ಭಾಗಿಯಾದ ಆರು ನೌಕರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹಿರಿಯ ವ್ಯವಸ್ಥಾಪಕ ಲಚಮು ಅಮ್ಮನೂರ್ಕರ್, ಕಚೇರಿ ಸಹಾಯಕ ಸದಾಶಿವ, ಸಹಾಯಕ ವ್ಯವಸ್ಥಾಪಕರಾಗಿದ್ದ ಪೈನಂ ಸುರೇಂದ್ರ, ಆನಂದ ತೊಗರಿ, ತಟಿಕೊಂಡ ರಮಾದೇವಿ, ಇದೀಗ ಕರ್ತವ್ಯಕ್ಕೆ ಸೇರಿರುವ ಸಂಗನಗೌಡ ಇವರ ಮೇಲೆ ಶಹಾಪುರ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಪ್ರಕರಣ ವಿವರ:
ಆರೋಪಿತರು 2017 ನೇ ಸಾಲಿನಿಂದ 2020ನೇ ಸಾಲಿನ ಅವಧಿಯಲ್ಲಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. 132 ನಕಲಿ ಖಾತೆಗಳನ್ನು ಮೋಸ ಮಾಡುವ ಉದ್ದೇಶದಿಂದ ಬ್ಯಾಂಕ್ ಗ್ರಾಹಕರ ಗುರುತಿನ ಚೀಟಿ ಬಳಸಿಕೊಂಡಿದ್ದಾರೆ. ಸುಮಾರು 10 ನಕಲಿ ಬೆಳೆ ಸಾಲ ಮಂಜೂರು ಮಾಡಿ ನಕಲಿ ಖಾತೆಗೆ ವರಗಾಯಿಸಿ ನಗದೀಕರಣ ಮಾಡಿರುವುದಲ್ಲದೇ ಎಲ್.ಡಿ. ಅಮ್ಮುನೋರ್ಕರ್ ಈ ಹಣ ಬಳಸಿಕೊಂಡಿರುವುದು ತಿಳಿದು ಬಂದಿದೆ.
ಅಲ್ಲದೇ ಸರ್ಕಾರದಿಂದ ಬಂದಿರುವ ಸಹಾಯಧನ, ಬೆಳೆ ಪರಿಹಾರ ಧನ, ಶಿಕ್ಷಣ ಸಾಲಗಳ ಸಹಾಯ ಧನ, ಮುಂತಾದ ಸಹಾಯ ಧನಗಳ ಇವುಗಳ ಬಗ್ಗೆ ತಿಳಿದಿದ್ದರೂ, ನಕಲಿ ಖಾತೆಗಳಿಗೆ ಹಣ ವರ್ಗಾಯಿಸಿ ನಗದೀಕರಿಸಿದ್ದಾರೆ. ಈ ವಂಚನೆಯಲ್ಲಿ ಒಟ್ಟು 42,62,219=26 ರೂಪಾಯಿ ದುರ್ಬಳಕೆಯಾಗಿದೆ.
ಈ ಬಗ್ಗೆ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕ ರಮೇಶಬಾಬು ಎಂ.ಬಿ. ತನಿಖೆ ನಡೆಸಿ ಪ್ರಧಾನ ಕಚೇರಿಗೆ ವರದಿ ಸಲ್ಲಿಸಿದ್ದಾರೆ. ಪ್ರಧಾನ ಕಚೇರಿಯ ತನಿಖಾ ವರದಿ ಪರಿಶೀಲಿಸಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ದೂರಿನಲ್ಲಿ ತಿಳಿಸಲಾಗಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)