ನಮ್ಮ ವಿಜಯಪುರ

ಜನಮನ ಸೂರೆಗೊಂಡ ಸಾಂಸ್ಕೃತಿಕ ಸಂಜೆ, ಓದಿ ನೀವೂ ಖುಷಿ ಪಡಿ…!

ಸರಕಾರ್ ನ್ಯೂಸ್ ವಿಜಯಪುರ 

ನಗರದ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಇವರ ಸಹಯೋಗದಲ್ಲಿ ಶನಿವಾರ ಆಯೋಜಿಸಲಾದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಹಾಗೂ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ಮಾಹೆಯ ಮೊದಲನೇ ಶನಿವಾರದಂದು ಐತಿಹಾಸಿಕ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುವುದಲ್ಲದೇ, ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕಾರಿ. ಭಯ, ಖಿನ್ನತೆ ಹೊಗಲಾಡಿಸಿ, ಆತ್ಮಸ್ಥೈರ್ಯದ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಪ್ರೇರಕ. ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುತ್ತದೆ. ನಮ್ಮ ನಾಡಿನ ಶ್ರೀಮಂತಿಕೆಯ ಪ್ರತೀಕವಾಗಿರುವ ಸಾಹಿತ್ಯ, ಸಂಗಿತ, ಕಲೆ, ಜನಪದ ಕಲೆ ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರೋತ್ಸಾಹ ಅಗತ್ಯ. ಒತ್ತಡದ ಜೀವನದ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವದು ಅವಶ್ಯಕವಾಗಿದೆ ಎಂದು ಹೇಳಿದರು.

ವಿಜಯಪುರದ ಕುಮಾರಿ ಕೃತಿಕಾ ಜಂಗಿಮಠ ಅವರು ಮೊದಲಿಗೆ ಶಾಸ್ತ್ರೀಯವಾಗಿ ಕೊಳಲು ವಾದನ ಆರಂಭಿಸಿ, ನಂತರ ಕನ್ನಡ ಜನಪ್ರಿಯ ಗೀತೆಗೆಳ ನುಡಿಸಿದರು. ವಿವಿಧ ರೀತಿಯ ಧ್ವನಿಯ ಮಿಮಿಕ್ರಿ ಕೊಳಲಿನ ನಾದದ ಮೂಲಕ ಹೊರಡಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ಪ್ರಕಾಶ ಸಿಂಗ್ ರಜಪೂತ ಅವರಿಂದ ಕನ್ನಡ ಗಜಲ್ ಗಾಯನ, ಶ್ರೀಶೈಲ ಹೂಗಾರ ಇವರಿಂದ ಹಾಸ್ಯ ಚಟಾಕಿ, ರತ್ನಮಾಲಾ ಡ್ಯಾನ್ಸ್ ಅಕಾಡೆಮಿಯಿಂದ ಸಮೂಹ ನೃತ್ಯ ಹಾಗೂ ಸೈನಿಕ ಶಾಲೆಯ ವಿದ್ಯಾರ್ಥಿಗಳಿಂದ “ವಾಲ್ಮೀಕಿ ರಾಮಾಯಣ” ನೃತ್ಯ ರೂಪಕ ಪ್ರದರ್ಶನ ಜನಮನ ಸೂರೆಗೊಂಡವು.

ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ, ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು. ಭಾಗವಹಿಸಿದ ಕಲಾವಿದರಿಗೆ ಜಿಲ್ಲಾಡಳಿತದಿಂದ ಪ್ರಮಾಣ ಪತ್ರ ನೀಡಿ, ಕಲಾ ಪ್ರತಿಭೆಗಳನ್ನು ಜಿಲ್ಲಾಧಿಕಾರಿ ಪ್ರೋತ್ಸಾಹಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಅವರು ತಮ್ಮ ವಿಶಿಷ್ಟ ಮಾತಿನ ಶೈಲಿಯಲ್ಲಿ ಹಾಸ್ಯ ಚಟಾಕಿಗಳನ್ನು ಸಾಂದರ್ಭಿಕವಾಗಿ ಹೇಳುವುದರ ಮೂಲಕ ನೆರೆದ ಪ್ರೇಕ್ಷಕರನ್ನು ನಗೆಗಡಲಲಿ ತೇಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಕುಟುಂಬ ಸಮೇತ ಭಾಗಿಯಾಗಿ ಕಲಾವಿದರಿಗೆ ಪ್ರೋತ್ಸಾಹಿಸಿದರು.

ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣನವರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ್ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಕಲಾವಿದರು, ಸಾಹಿತಿಗಳು, ಕಲಾಭಿಮಾನಿಗಳು, ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

error: Content is protected !!