ತಿಪ್ಪೆ ಕುಣಿಯಲ್ಲಿ ಮುಳುಗಿಸಿ ಕೊಲೆ, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಸರಕಾರ ನ್ಯೂಸ್ ವಿಜಯಪುರ
ಅನೈತಿಕ ಸಂಬಂಧದ ಹಿನ್ನೆಲೆ ಯುವಕನನ್ನು ತಿಪ್ಪೆ ಕುಣಿಯಲ್ಲಿ ಮುಳುಗಿಸಿ ಸಾಯಿಸಿದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.
ಜೆಟ್ಟೆಪ್ಪ ಶರಣಪ್ಪ ಬಿಸನಾಳ, ಶಿವಪ್ಪ ಶರಣಪ್ಪ ಬಿಸನಾಳ ಹಾಗೂ ಮುತ್ತಪ್ಪ ಭೀರಪ್ಪ ಬಿಸನಾಳ ಶಿಕ್ಷೆಗೆ ಗುರಿಯಾಗಿದ್ದಾರೆ. 2019 ಅ.19 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಟ್ಟರಕಿ ಗ್ರಾಮದ ಸರ್ವೆ ನಂ. 84/3ರಲ್ಲಿ ಸಚೀನ ಸಂಗಪ್ಪ ಅಗಟಗಿ (18) ಎಂಬಾತನನ್ನು ಮೂವರು ಸೇರಿ ಕೊಲೆ ಮಾಡಿದ್ದರು.
ಏನಿದು ಪ್ರಕರಣ?
ಸಚೀನ ಸಂಗಪ್ಪ ಅಗಟಗಿ ಈತ ಸೆಟ್ಟೆಪ್ಪ ಶರಣಪ್ಪ ಬಿಸನಾಳನ ಹೆಂಡತಿ ದುಂಡವ್ವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂದು ಸಂಶಯ ಇತ್ತು. ಈ ಬಗ್ಗೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿದ್ದಲ್ಲದೇ ಹದರಿಯ ಖಾಜಾನ ದರ್ಗಾಕ್ಕೆ ಕರೆದುಕೊಂಡು ಹೋಗಿ ದರ್ಗಾ ಮುಟ್ಟಿಸಿ ಬುದ್ದಿವಾದ ಹೇಳಿದ್ದರೂ ಅಪರಾಧಿಗಳು ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಸಚೀನ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಲ್ಲೆ ನಡೆಸಿದ್ದಾರೆ. ಜೆಟ್ಟೆಪ್ಪ ಶರಣಪ್ಪ ಬಿಸನಾಳ, ಶಿವಪ್ಪ ಶರಣಪ್ಪ ಬಿಸನಾಳ ಹಾಗೂ ಮುತ್ತಪ್ಪ ಭೀರಪ್ಪ ಬಿಸನಾಳ ಸೇರಿಕೊಂಡು ಸಚೀನನ್ನು ಅಟ್ಟಿಸಿಕೊಂಡು ಹೋಗಿ ಜಮೀನಿನಲ್ಲಿರುವ ತಿಪ್ಪೆ ಕುಣಿಯಲ್ಲಿ ಮಳೆಯ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾರೆ. ಸ್ಥಳದಲ್ಲಿದ್ದ ಮಲ್ಲಪ್ಪ ಅಗಟಗಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಸಿಂದಗಿ ಸಿಪಿಐ ಸತೀಶ ಕುಮಾರ ಎಸ್.ಕಾಂಬಳೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆಪಾದನಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸುಭಾಶ ಸಂಕದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಡಿ. ಬಾಗವಾನ ವಾದ ಮಂಡಿಸಿದ್ದರು.