ಶಾಸಕ ಯತ್ನಾಳ ಕಾಲೆಳೆದ ಸಚಿವ ಎಂ.ಬಿ. ಪಾಟೀಲ !
ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೋಕಸಭೆ ಸದಸ್ಯರೋ ಅಥವಾ ಶಾಸಕರೋ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಕಾಲೆಳೆದಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ವಿಚಾರವನ್ನಿಟ್ಟುಕೊಂಡು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯತ್ನಾಳ ಲೋಕಸಭೆ ಸದಸ್ಯರೋ….ರಾಜ್ಯ ವಿಧಾನ ಸಭೆಯ ಸದಸ್ಯರೋ…? ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಯತ್ನಾಳರಿಗೆ ಕಾಳಜಿ ಇದ್ದರೆ ರಾಜ್ಯಕ್ಕೆ ಬರಬೇಕಾದ ಅನುದಾನ ಕೊಡಿಸಲಿ ಎಂದರು. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ಕೊಡದ ಕಾರಣ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಬರ ಪರಿಹಾರ ಹಣ ನೀಡಲಿಲ್ಲ. ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲಿಲ್ಲ. ಹಣ ಕೊಡುವುದಾಗಿ ಹೇಳಿದರೂ ಅಕ್ಕಿ ಹರಾಜು ಹಾಕಿದರೆ ವಿನಃ ರಾಜ್ಯಕ್ಕೆ ಕೊಡಲಿಲ್ಲ. ಯತ್ನಾಳ ಆಗ ಮನವಿ ಕೊಡಬೇಕಿತ್ತು ಎಂದರಲ್ಲದೇ ಚಂದ್ರಬಾಬು ನಾಯ್ಡು, ನಿತೀಶಕುಮಾರ ಅವರಂತೆ ಯತ್ನಾಳ ಸಹ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಕೊಡಿಸಲಿ ನೋಡೋಣ ಎಂದರು.