ವಿಜಯಪುರ

ಗುಮ್ಮಟನಗರಿಯಲ್ಲಿ ಮನೆಗಳ್ಳತನ ಪ್ರಕರಣ, ಓರ್ವ ಆರೋಪಿಯ ಬಂಧನ, 7.90 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶ

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಈಚೆಗೆ ಘಟಿಸಿದ ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ಎಸ್‌ಪಿ ಎಚ್.ಡಿ.ಆನಂದಕುಮಾರ ವಿಶೇಷ ತಂಡ ನೇಮಿಸಿದ್ದು, ಸದರಿ ತಂಡ ಓರ್ವನನ್ನು ಬಂಧಿಸಿ 7.90 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿದೆ.

ವಿಜಯಪುರದ ನಿಸಾರಮಡ್ಡಿಯ ಲಾಲ ಬಂಗಲಾ ಚರ್ಚ್ ಹತ್ತಿರದ ನಿವಾಸಿ ಮುತ್ತಪ್ಪಾ ಹಣಮಂತ ಮೂಲಿಮನಿ (25) ಎಂಬಾತನನ್ನು ಶನಿವಾರ ಬಂಧಿಸಲಾಗಿದೆ. ರಿಂಗ್ ರೋಡ್ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಆರೋಪಿ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಮುತ್ತಪ್ಪಾ ತನ್ನ ಸ್ನೇಹಿತ ಮನಖಾದ್ರಿ ಊರ್ಫ್ ಮನ್ಯಾ ಬಂದಗಿಸಾಬ ನಾಲತ್ತವಾಡ (ಈತ ಮರಣ ಹೊಂದಿದ್ದಾನೆ) ಜೊತೆಗೂಡಿ ಜಲನಗರ ಠಾಣೆ ವ್ಯಾಪ್ತಿಯ 5 ಪ್ರಕರಣಗಳಲ್ಲಿ ಕಳ್ಳತನ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನಿಂದ 150 ಗ್ರಾಂ ಚಿನ್ನಾಭರಣ, 40 ಗ್ರಾಂ ಬೆಳ್ಳಿಯ ಆಭರಣ ಸೇರಿ ಒಟ್ಟು 7.90 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.
ಕಳ್ಳತನ ಪ್ರಕರಣ ಭೇದಿಸಲು ಎಸ್‌ಪಿ ಎಚ್.ಡಿ. ಆನಂದಕುಮಾರ, ಎಎಸ್‌ಪಿ ರಾಮ ಅರಸಿದ್ದಿ ಹಾಗೂ ಡಿವೈಎಸ್‌ಪಿ ಲಕ್ಷ್ಮಿನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಸಿ.ಅವಜಿ ನೇತೃತ್ವ ತಂಡ ರಚಿಸಲಾಗಿತ್ತು. ಪಿಎಸ್‌ಐ ಜ್ಯೋತಿ ಖೋತ, ಸೀತಾರಾಮ, ಸಿಬ್ಬಂದಿ ಯಲ್ಲಪ್ಪ ಆರ್. ಮಂಕಣಿ, ಪಿ.ಎಸ್.ಬಿರಾದಾರ, ಲಕ್ಷ್ಮಣ ಎಂ. ಬಿರಾದಾರ, ಸಂತೋಷ ಎಚ್.ನಾಯಕ್, ಯೋಗೇಶ ಮಾಳಿ, ಭೀಮಾಶಂಕರ ಮಕಣಾಪುರ, ಎಸ್.ಎಲ್. ಕಲಾದಗಿ, ಎಸ್.ಎಂ. ನಂದೇಶ, ನಿಂಗಪ್ಪ ವಠಾರ, ಮಾಳಪ್ಪಾ ಹಾವಡಿ, ಮುತ್ತಣ್ಣ ಗುಣದಾಳ ತನಿಖಾ ತಂಡದಲ್ಲಿದ್ದರು.

error: Content is protected !!