ಡೋಣಿ ನದಿ ಉಳಿಸಿ ಅಭಿಯಾನ, ತಿಕೋಟಾದಲ್ಲಿ ಜಾಗೃತಿ ಜಾಥಾ, ಕಂಜರ ನುಡಿಸಿ ಅಭಿಯಾನಕ್ಕೆ ಚಾಲನೆ
ತಿಕೋಟಾ: ಪಂಚನದಿಗಳ ಬೀಡು ಎಂದೇ ಖ್ಯಾತಿ ಪಡೆದ ಅವಿಭಜಿತ ವಿಜಯಪುರ ಜಿಲ್ಲೆಯ ಡೋಣಿ ನದಿ ಉಳಿವಿಗಾಗಿ ಹೋರಾಟ ಆರಂಭಗೊಂಡಿದ್ದು, ಭಾನುವಾರ ತಿಕೋಟಾ ಪಟ್ಟಣದಲ್ಲಿ ಭರ್ಜರಿ ಚಾಲನೆ ಪಡೆದುಕೊಂಡಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಂಜರ ನುಡಿಸುವ ಮೂಲಕ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಪ್ರಗತಿಪರ ರೈತರು, ನೀರಾವರಿ ಹೋರಾಟಗಾರರು, ಜಲ ತಜ್ಞರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಡೋಣಿ ನದಿ ಸಂಪೂರ್ಣ ಬತ್ತಿದೆ. ಮಳೆಗಾಲದಲ್ಲಿ ಪ್ರವಾಹ ಭೀತಿ ಕಾಡುತ್ತಿದೆ. ಸ್ವಲ್ಪ ಮಳೆಯಾದರೂ ಸುತ್ತಲಿನ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಹೀಗಾಗಿ ಡೋಣಿ ರೈತರಿಗೆ ವರವಾಗುವ ಬದಲು ಶಾಪವಾಗುತ್ತಿದೆ. ಡೋಣಿ ನದಿ ಹೂಳು ತೆಗೆದು ನೀರು ಸರಾಗವಾಗಿ ಹರಿದುಹೋಗಲು ಅನುವು ಮಾಡಿಕೊಡಬೇಕಿದೆ.
ಡೋಣಿ ಪ್ರವಾಹ ತಡೆಗೆ ಸರ್ಕಾರದ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ತಾತ್ಕಾಲಿಕ ಪರಿಹಾರಕ್ಕಾಗಿ ಸೇತುವೆ ನಿರ್ಮಾಣ ಮಾಡಿ ಪುನರ್ವಸತಿ ಕಲ್ಪಿಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಾಜಕಾರಣಿಗಳು, ಗುತ್ತಿಗೆದಾರರು ಮನೆ ತುಂಬಿಸಿಕೊಂಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಡೋಣಿ ನದಿ ಸಮೀಕ್ಷೆ ಮಾಡಿ ಪುನರುಜ್ಜೀವನಗೊಳಿಸಲು ಆಗ್ರಹಿಸಿ ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಈ ಕಾಮಗಾರಿ ಆರಂಭಿಸಿದರೆ ಕೃಷಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಹಳ್ಳಿಗಳಲ್ಲಿನ ಜನ ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಮುಖ್ಯವಾಗಿ ನದಿಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಬರುವ ಪ್ರವಾಹ ತಡಗಟ್ಟಿದಂತಾಗುತ್ತದೆ. ನದಿಯ ನೀರು ರೈತರು ತಮ್ಮಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿ ಕೃಷಿ ಉತ್ಪನ್ನ ಇಳುವರಿ ಹೆಚ್ಚುತ್ತದೆ. ಆ ಮೂಲಕ ರೈತರು ಸುಖಿ ಜೀವನ ನಡೆಸಲು ಸಹಾಯಕಾರಿಯಾಗುತ್ತದೆ. ರೈತರಿಗೆ ನೀರು ಕೊಟ್ಟರೇ ಸರ್ಕಾರ ಕೊಡುವ ಯಾವ ಸಾಲ ಸಬ್ಸಿಡಿ ಬೇಕಿಲ್ಲ, ಪ್ರತಿಯಾಗಿ ಸರ್ಕಾರಕ್ಕೆ ರೈತರೇ ಸಾಲ ಕೊಡುವಷ್ಟು ಸ್ವಾಭಿಮಾನಿಗಳಾಗುತ್ತಾರೆ ಎಂದು ಹೇಳಿದರು.
ತಿಕೊಟಾದಿಂದ ರಾಂಪೂರ, ಹೊನವಾಡ, ಕೋಟ್ಯಾಳ, ಹರನಾಳ, ದಾಶ್ಯಾಳ, ದನ್ಯಾಳ, ತಾಜಪೂರ ಗ್ರಾಮಗಳಲ್ಲಿ ಜಾಥಾ ಮಾಡಲಾಯಿತು. ಪ್ರತಿ ಗ್ರಾಮಗಳಲ್ಲಿ ರೈತರ ಸಭೆ ನಡೆಸಲಾಯಿತು.
ಹೋರಾಟಗಾರ ಅಪ್ಪಾಸಾಹೇಬ ಯರನಾಳ, ಮುಖಂಡ ಸೋಮನಾಥ ಬಾಗಲಕೋಟ, ರಿಯಾಜ್ ಫಾರೂಕಿ, ಪ್ರಕಾಶ ಹಿಟ್ಟಿನಹಳ್ಳಿ, ಜಲ ಬಿರಾದರಿ ಸಂಸ್ಥೆಯ ಜಿಲ್ಲಾಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಮತ್ತು ಆರ್‌ಕೆಎಸ್ ರೈತ ಸಂಘಟನೆಯ ಜಿಲ್ಲಾ ಸಂಚಾಲಕ ಬಾಳು ಜೇವೂರ, ಕಾರ್ಮಿಕ ಮುಖಂಡರಾದ ಸಿ.ಎ. ಗಂಟೆಪ್ಪಗೋಳ, ಪ್ರಭುಗೌಡ ಪಾಟೀಲ, ಡಾ.ಶ್ರೀಶೈಲ ಬಳೋಲಗಿ, ಬಾಬುರಾವ ಮಹಾರಾಜ, ಧರೆಪ್ಪ ಗುಗ್ಗರಿ, ತಾಪಂ ಮಾಜಿ ಅಧ್ಯಕ್ಷೆ ಪ್ರಭಾವತಿ ನಾಟಿಕಾರ ಮಾತನಾಡಿದರು. ಶ್ರೀಧರ ನಾರಾಯಣಕರ, ಮಹಾಂತೇಶ ಕೆರೂಟಗಿ, ಭಾರತಿ ದೇವತೆ, ಜಯಶ್ರೀ ಕಂಬಾರ, ಸುರೇಶ ಕೊಣ್ಣೂರ, ಹಾಜಿಲಾಲ್ ಕೊಟ್ಟಲಗಿ, ಮಹಾದೇವ ಲಿಗಾಡೆ, ಆಕಾಶ ರಾಮತೀರ್ಥ, ವಕೀಲರಾದ ಎಂ.ಎ. ಬಗಲಿ, ಶಂಕರ ಹಾಲಳ್ಳಿ, ದಯಾನಂದ ಕಾಳೇಲ ಮತ್ತಿತರರಿದ್ದರು.