ಸ್ಟೋರ್ ಕೀಪರ್ ಆಗಿದ್ದವರನ್ನು ಕರೆತಂದೆ… ರಾಜಕೀಯವಾಗಿ ಮೇಲೆತ್ತಿದೆ? ಸಂಸದ ಜಿಗಜಿಣಗಿ ಹೇಳಿದ್ದು ಯಾರ ಬಗ್ಗೆ ಗೊತ್ತಾ?
ವಿಜಯಪುರ: ಯಾವೊಬ್ಬ ನಾಯಕನೂ ತನ್ನ ಸಮುದಾಯದವರನ್ನು ಬೆಳೆಯಲು ಬಿಡಲ್ಲ, ಅಂಥದರಲ್ಲಿ ನನ್ನದೇ ಸಮುದಾಯದ ಗೋವಿಂದ ಕಾರಜೋಳರನ್ನು ರಾಜಕೀವಾಗಿ ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡಿದೆ, ಅವರಿಗಾಗಿ ರಾಜ್ಯ ರಾಜಕಾರಣದತ್ತ ಸುಳಿಯಲೇ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಮನಸ್ಸಿನ ಮಾತು ಬಿಚ್ಚಿಟ್ಟರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿಂದ ಕಾರಜೋಳ ಮತ್ತು ನಾನು ಕುಲಬಾಂಧವರು. ನಮ್ಮಿಬ್ಬರ ಮಧ್ಯೆ ಏನೇನೋ ತಂದಿಡಬೇಡಿ ಎಂದ ಸಂಸದ ಜಿಗಜಿಣಗಿ, ಕಾರಜೋಳ ನನ್ನ ಎತ್ತರಕ್ಕೆ ಬೆಳೆಯಬೇಕೆಂದು 25 ವರ್ಷ ರಾಜ್ಯ ರಾಜಕಾರಣ ಬಿಟ್ಟು ದೂರ ಇದ್ದೇನೆ. ಬೆಂಗಳೂರು ಕಡೆ ಹಾಯ್ದಿಲ್ಲ. ಈ ಬಾರಿ ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ ಎಂದರು.
ಸ್ಟೋರ್ ಕೀಪರ್ ಆಗಿದ್ದವರನ್ನು ತಂದು ಟಿಕೆಟ್ ಕೊಡಿಸಿದೆ. ನಾನು ಕೇಂದ್ರಕ್ಕೆ ಹೋದೆ. ಆ ಬಳಿಕ ರಾಜ್ಯ ರಾಜಕಾರಣದತ್ತ ತಿರುಗಿಯೋ ನೋಡಲಿಲ್ಲ. ಯಾರಾದರೂ ತಮ್ಮ ಸಮುದಾಯದರನ್ನು ಇಷ್ಟು ಎತ್ತರಕ್ಕೆ ಬೆಳೆಸುತ್ತಾರಾ? ಎಂದ ಜಿಗಜಿಣಗಿ ಕಾರಜೋಳ ಮತ್ತು ನಮ್ಮ ಮಧ್ಯೆ ಉತ್ತಮ ಬಾಂಧವ್ಯ ಇದೆ ಎಂದರು.
ಇನ್ನು ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸದ್ಯಕ್ಕೆ ನಾನು ನಾಗಠಾಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ತೀರ್ಮಾನ ಕೈಗೊಂಡರೆ ಅದಕ್ಕೆ ಬದ್ಧ ಎಂದರು.