ಶಾಸಕ ಯತ್ನಾಳ ಹೇಳಿಕೆ ಬೆನ್ನಲ್ಲೇ ಹೊಸ ಚರ್ಚೆ, ಟಿಕೆಟ್ ಬದಲಾವಣೆ ಬಗ್ಗೆ ಬಿಸಿ ಬಿಸಿ ಚರ್ಚೆ, ವೈರಲ್ ಆದ ಪೋಸ್ಟ್‌ನಲ್ಲಿ ಏನಿದೆ?
ವಿಜಯಪುರ: ಒಂದಿಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇನ್ನೂ ಅಧಿಕಾರದಲ್ಲಿರುವಾಗಲೇ ಟಿಕೆಟ್ ಬದಲಾವಣೆ ಚರ್ಚೆ ಜೋರಾಗುತ್ತಿದೆ.
‘ಸಿಎಂ ಮಾಡಲು ನನಗೆ 2500 ಕೋಟಿ ರೂ.ಕೇಳಿದ್ದರು’ ಎಂಬ ಹೇಳಿಕೆ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿದ್ದ ಯತ್ನಾಳರ ಮೇಲೆ ಪಕ್ಷ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಆ ಬಗ್ಗೆ ಯಾವುದೇ ಚರ್ಚೆ ಕೂಡ ಬಹಿರಂಗಗೊಂಡಿಲ್ಲ. ಅದಾಗಲೇ ವಿಜಯಪುರ ನಗರ ಕ್ಷೇತ್ರದ ಟಿಕೆಟ್ ಬದಲಾವಣೆ ಗುಸುಗುಸು ಕೇಳಿ ಬರುತ್ತಿದೆ.
ರಾಮಚಂದ್ರ ಯರಗಲ್ಲ ಎಂಬುವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ‘ವಿಜಯಪುರ ನಗರ..ವಿಧಾನ ಸಭೆ ಚುನಾವಣೆಗೆ ಹೊಸ ಅಭ್ಯರ್ಥಿಗೆ ಮಣೆ ಹಾಕಲಿದೆಯಾ ಬಿಜೆಪಿ ಹೈಕಮಾಂಡ್ ?’ ಎಂದು ಬರೆದುಕೊಂಡಿದ್ದಾರೆ. ಮಹೇಶ ಬಿದನೂರ ಎಂಬುವರು ಇದ್ದನ್ನು ಹಂಚಿಕೊಂಡಿದ್ದು ಪರ-ವಿರೋಧ ಚರ್ಚೆ ಶುರುವಾಗಿದೆ.
ಕೆಲವರು ರಮೇಶ ಬಿದನೂರ ಮುಂದಿನ ಅಭ್ಯರ್ಥಿ ಎಂದು ಪ್ರತಿಕ್ರಿಯಿಸಿದ್ದರೆ ಇನ್ನೂ ಕೆಲವರು ಉಮೇಶ ವಂದಾಲ್ ಗೆ ಟಿಕೆಟ್ ಪಕ್ಕಾ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಪರ ವಿರೋಧ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಈ ಚರ್ಚೆ ಗಮನಿಸಿದರೆ ‘ಶಾಸಕ ಬಸನಗೌಡ ಪಾಟೀಲ ಯತ್ನಾಳ’ ಅವರ ಮೇಲೆ ಬಿಜೆಪಿ ಹೈಕಮಾಂಡ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಪಕ್ಕಾ ಎಂದು ಇವರು ಭಾವಿಸಿದಂತಿದೆ. ಅದೇನೇ ಇರಲಿ ಚರ್ಚೆಯಂತೂ ಶುರುವಾಗಿದ್ದು ಇನ್ನೂ ಚುನಾವಣೆ ಸಮೀಪಿಸುವುದೊರಳಗಾಗಿ ಏನೇನು ಬೆಳವಣಿಗೆಗಳಾಗುತ್ತವೋ ಕಾದು ನೋಡಬೇಕಷ್ಟೆ.