ಸ್ಮಾರ್ಟ್ ಆಗುವುದೇ ಗುಮ್ಮಟ ನಗರಿ? ಪ್ರಸ್ತಾವನೆ ಸಲ್ಲಿಕೆಗೆ ಕೇಂದ್ರ ಸರ್ಕಾರ ಹೇಳಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಸಮಗ್ರ ಮಾಹಿತಿ…..
ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಲಿದೆಯಾ? ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿದ್ದು ಯಾವಾಗ? ಕೇಂದ್ರ ಸರ್ಕಾರ ಹೇಳಿದ್ದೇನು? ರಾಜ್ಯದಲ್ಲಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಜಿಲ್ಲೆಗಳು ಯಾವವು? ಹಾಗಾದರೆ ವಿಜಯಪುರ ಸ್ಮಾರ್ಟ್ ಸಿಟಿ ಆಗುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಬೇಕೆ….ಹಾಗಿದ್ದರೆ ಈ ವರದಿ ಓದಿ.
ರಾಜ್ಯದ ಏಳು ನಗರಗಳು ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾದ ಬೆನ್ನಲ್ಲೇ ವಿಜಯಪುರ ಕೂಡ ಸ್ಮಾರ್ಟ್ ಸಿಟಿಯಾಗಬೇಕೆಂಬ ಯೋಚನೆ ಮತ್ತು ಯೋಜನೆ ಗುಮ್ಮಟ ನಗರಿಯ ನಿವಾಸಿಗಳಲ್ಲೂ ಮನೆ ಮಾಡಿತು. ಸಂಸದ ರಮೇಶ ಜಿಗಜಿಣಗಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಸ್ಮಾರ್ಟ್ ಸಿಟಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿತು. ಆ ಪ್ರಕಾರ ಪ್ರಸ್ತಾವನೆಯೂ ಸಲ್ಲಿಕೆಯಾಗಿದ್ದು ಈಗ ಹಳೇ ಮಾತು. ಹಾಗಾದರೆ ಫಲಿತಾಂಶ ಏನಾಯಿತು?
ರಾಜ್ಯದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ ಅಭಿಯಾನದಡಿ ಆಯ್ಕೆಯಾಗಿವೆ. ಈ ನಗರಗಳಿಗೆ ತಲಾ 500 ಕೋಟಿ ರೂ.ಗಳಂತೆ ಒಟ್ಟು 1000 ಕೋಟಿ ರೂ.ಅನುದಾನ ಹಂಚಿಕೆ ಮಾಡಿದೆ.
ರಾಜ್ಯದಿಂದ ಆಯ್ಕೆಯಾದ ಈ 7 ನಗರಗಳಿಗೆ ಕೇಂದ್ರದಿಂದ 2350 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 2338.43 ಕೋಟಿ ರೂ. ಸೇರಿ ಒಟ್ಟು 4688.43 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಂದ ಸ್ಪರ್ಧೆ ಮುಖಾಂತರ ನಗರಗಳನ್ನು ಆಯ್ಕೆ ಮಾಡಿರುತ್ತದೆ. ಅದರಂತೆ ಮಾರ್ಗಸೂಚಿಯ ಮಾದಂಡಗಳ ಅನುಸಾರ ಅತಿ ಹೆಚ್ಚು ಅಂಕ ಪಡೆದ ರಾಜ್ಯ ಈ ಏಳು ನಗರಗಳು ಸ್ಮಾರ್ಟ್ ಸಿಟಿ ಅಭಿಯಾನದಡಿ ಆಯ್ಕೆಯಾಗಿವೆ. ಅದೇ ತೆರನಾಗಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕಲಬುರಗಿ ಮತ್ತು ಬಳ್ಳಾರಿ ನಗರ ಸೇರಿದಂತೆ ವಿಜಯಪುರ ಹಾಗೂ ಮೈಸೂರು ನಗರಗಳನ್ನು ಸಹ ಸ್ಮಾರ್ಟ್ ಸಿಟಿ ಅಭಿಯಾನದಡಿ ಪರಿಗಣಿಸಿ ಪ್ರತಿ ನಗರಕ್ಕೆ 1000 ಕೋಟಿ (ರಾಜ್ಯ ಹಾಗೂ ಕೇಂದ್ರದ ಶೇ.50:50 ಅನುಪಾತದಂತೆ) ಅನುದಾನ ಹಂಚಿಕೆ ಮಾಡಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ 2020 ಮೇ 22 ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಬಗ್ಗೆ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯದಿಂದ 2021 ನ 25 ರಂದು ಬಂದ ಪತ್ರದಲ್ಲಿ ಪ್ರಸ್ತುತ ಸ್ಮಾರ್ಟ್ ಸಿಟಿ ಅಭಿಯಾನದಡಿ ರಾಜ್ಯದಿಂದ ಹೆಚ್ಚುವರಿ ನಗರಗಳ ಸೇರ್ಪಡೆಗೆ ಅವಕಾಶವಿಲ್ಲವೆಂದು ಸ್ಪಷ್ಟೀಕರಿಸಿದ್ದಾರೆ. ಹೀಗಾಗಿ ಜಿಲ್ಲೆಯ ಸಂಸದರು ಹಾಗೂ ಶಾಸಕರು ಸ್ಮಾರ್ಟ್ ಸಿಟಿ ಯೋಜನೆಗೆ ಸರ್ಕಾರದ ಮೇಲೆ ಒತ್ತಡ ಹಾಕುವರೇ? ಗುಮ್ಮಟ ನಗರಿಯನ್ನುಸ್ಮಾರ್ಟ್ ಆಗಿಸುವರೇ? ಸಂಘಟನೆಗಳು, ಜನಸಾಮನ್ಯರು ಸ್ಮಾರ್ಟ್ ಸಿಟಿಗಾಗಿ ಧ್ವನಿ ಎತ್ತುವರೇ ಎಂಬ ಕುತೂಹಲ ಮನೆ ಮಾಡಿದೆ.