ವಿಜಯಪುರದಲ್ಲಿ ಆಮ್ ಆದ್ಮಿ ಮೆರವಣಿಗೆ, ಮಾಜಿ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಪ್ರಶ್ನೆ, ಈಶ್ವರಪ್ಪನನ್ನು ಏಕೆ ಬಂಧಿಸಿಲ್ಲ?
ವಿಜಯಪುರ: ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಎಸ್. ಈಶ್ವರಪ್ಪ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಆಪ್ ಮುಖಂಡ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಪ್ರಶ್ನಿಸಿದ್ದಾರೆ.
ಬೇರೆ ಯಾರಾದರೂ ಆಗಿದ್ದರೆ ಇಷ್ಟೊತ್ತಿಗಾಗಲೇ ಬಂಧಿಸಿ ಜೈಲಿಗಟ್ಟುತ್ತಿರಲಿಲ್ಲವೇ? ಪ್ರಭಾವಿ ಎನ್ನುವ ಕಾರಣಕ್ಕೆ ಬಂಧಿಸಿರಲಿಕ್ಕಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
ಸಂತೋಷ ಆತ್ಮಹತ್ಯೆ ಪ್ರಕರಣ ದುಃಖದ ಘಟನೆ. ಒಟ್ಟು 108 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸಚಿವರು ಮೌಖಿಕ ಆದೇಶ ನೀಡಿದ್ದಾರೆಂದು ಹೇಳಲಾಗುತ್ತಿದೆ. ಸಚಿವರ ಮಾತನ್ನು ನಂಬಿ ಕೆಲಸ ಮಾಡಿದ ಸಂತೋಷಗೆ ಸಂಬಳ ಕೊಡದೇ ಪರ್ಸೆಂಟೇಜ್ ಕೇಳಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ದಾಖಲಾಗಿದೆ. ಇದೊಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ. ಆದರೂ ಆರೋಪಿಗಳನ್ನು ಏಕೆ ಬಂಧಿಸಿಲ್ಲ. ಬೇರೆಯವರಾಗಿದ್ದರೆ ಇಷ್ಟೊತ್ತಿಗಾಗಲೇ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಬಹುಶಃ ಸರ್ಕಾರದ ಒತ್ತಡದಿಂದ ಈಶ್ವರಪ್ಪ ಅವರನ್ನು ಬಂಧಿಸಲಿಕ್ಕಿಲ್ಲ ಎಂದರು.
ಇದಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ವಿವಿಧ ಮಾರ್ಗಗಳಲ್ಲಿ ಆಮ್ ಆದ್ಮಿಯಿಂದ ರ‌್ಯಾಲಿ ನಡೆಯಿತು. ಬಳಿಕ ಪಕ್ಷ ಸೇರ್ಪಡೆ ಕಾರ್ಯಕ್ರಮ ನೆರವೇರಿಸಲಾಯಿತು. ಮುಖಂಡ ರೋಹನ್ ಐನಾಪುರ ಮತ್ತಿತರರಿದ್ದರು.