ಶಾಸಕ ಯತ್ನಾಳ ವಿರುದ್ದ ಗಂಭೀರ ಆರೋಪ, ಮೀಸಲಾತಿ ಹೆಸರಿನಲ್ಲಿ ಬ್ಲಾಕ್ ಮೇಲ್, ಪಂಚಮಸಾಲಿ ಸಮಾಜ ರಾಜಕೀಯವಾಗಿ ಬಳಕೆ….!
ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಂಚಮಸಾಲಿ ಸಮಾಜವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರಲ್ಲದೇ 2 ಎ ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಬಿಜೆಪಿ ಪಕ್ಷದಲ್ಲಿರುವ ಪಂಚಮಸಾಲಿ ಸಮಾಜದ ಮುಖಂಡರು ಆರೋಪಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ
ಪಂಚಮಸಾಲಿ ಸಮಾಜದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರಿಂದ ಪಕ್ಷದಲ್ಲಿರುವ ಸಮಾಜದ ನಾಯಕರಿಗೆ ಮುಜುಗರ ಉಂಟಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮುಖಂಡ ಸುರೇಶ ಬಿರಾದಾರ ಮಾತನಾಡಿ, ಪಂಚಮಸಾಲಿ ಸಮಾಜ ಶಿಸ್ತು ಹಾಗೂ ಒಗ್ಗಟ್ಟು ಕಾಯ್ದುಕೊಂಡಿದೆ. ಯತ್ನಾಳ ಅವರು ಪಂಚಮಸಾಲಿ ಸಮಾಜ ಎಂದು ಹೇಳಿ ಬಹಳಷ್ಟು ಕಡೆ ವೇದಿಕೆ ಮೇಲೆ 2 ಎ ಮೀಸಲಾತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಯತ್ನಾಳ ಅವರು 1994 ರಲ್ಲಿ ಮೊದಲ ಬಾರಿ ಶಾಸಕರಾದರು. ಅಲ್ಲಿಂದ ಇಲ್ಲಿಯವರೆಗೆ ಯಾರನ್ನು ಬೆಳೆಸಿದ್ದೀರಿ. ಸಮಾಜದ ಯಾವ ಮುಖಂಡರಿಗೆ ರಾಜಕೀಯವಾಗಿ ಮೇಲಕ್ಕೆತ್ತಿ ದ್ದೀರಿ ಎಂದು ಯತ್ನಾಳ ಅವರನ್ನು ಪ್ರಶ್ನಿಸಿದರು.
ಕೂಡಲಸಂಗಮ ಸ್ವಾಮೀಜಿ ಮೊದಲಿನಿಂದಲೂ ಮೀಸಲಾತಿ ಗೆ ಹೋರಾಡುತ್ತಾ ಬಂದಿದ್ದಾರೆ. ಆದರೆ ತಾವು ಯಾವಾಗಿನಿಂದ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು .
ಹರಿಹರ ಪೀಠದ ಮೊದಲ ಜಗದ್ಗುರುವಿನ ಬಗ್ಗೆ ಅವಮಾನಕರ ವಾಗಿ ಮಾತನಾಡುತ್ತೀರಿ. ಒಂದೆಡೆ ಹಿಂದುತ್ವದ ಬಗ್ಗೆ ಮಾತಾಡೋದು, ಇನ್ನೊಂದು ಕಡೆ ಸಮಾಜದ ಬಗ್ಗೆ ಮಾತಾಡೋದು,ಮತ್ತೊಂದು ಕಡೆ ಸ್ವಾಮೀಜಿಗಳನ್ನು ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ? ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ಕೂಡಲ ಸಂಗಮಕ್ಕೆ ಬಂದ 25 ಲಕ್ಷ ರೂ.ಗಳನ್ನು ಮರಳಿ ಸರ್ಕಾರಕ್ಕೆ ಕಳುಹಿಸಿದ್ದಾಗಿ ಹೇಳಿದ್ದೀರಿ..ಅದರ ದಾಖಲೆ ಎಲ್ಲಿದೆ? ಎಂದು ಪ್ರಶ್ನಿಸಿದರು.
ಪಂಚಮಸಾಲಿ ಸಾಮಜದವರಿಗೆ ಪಕ್ಷದಲ್ಲಿ ಸ್ಥಾನಮಾನ ಕೊಟ್ಟಾಗ ನೀವೇ ವಿರೋಧ ಮಾಡಿದ್ದೀರಿ. ಮಳುಗೌಡ ಪಾಟೀಲ ನಗರ ಮಂಡಲ ಅಧ್ಯಕ್ಷರಾದಾಗ ನೀವೇ ನಿಮ್ಮ ಬೆಂಬಲಿಗರನ್ನು ಕಳುಹಿಸಿ ವಿರೋಧ ಮಾಡಿದಿರಿ. ಹೀಗಿರುವಾಗ ಸಮಾಜದ ಹೆಸರಲ್ಲಿ ಮಾತನಾಡವುದು ಸರಿಯಲ್ಲ ಎಂದರು.
ಕೂಡಲಸಂಗಮ ಶ್ರೀಗಳ ಬಗ್ಗೆ ನಮಗೆ ಗೌರವ ಇದೆ. ತಾವೊಬ್ಬ ಸಮಾಜದ ವ್ಯಕ್ತಿಯಾಗಿ ಬಬಲೇಶ್ವರ ಹಾಗೂ ಹರಿಹರ ಪೀಠದ ಸ್ವಾಮೀಜಿಗಳನ್ನೂ ಗೌರವದಿಂದ ಕಾಣಬೇಕು. ಬೆಂಗಳೂರಿಲ್ಲಿ ಲಕ್ಷ ಲಕ್ಷ ಜನ ಸೇರಿದ್ದಾರೆಂದರೆ ಅದಕ್ಕೆ ಹರಿಹರ ಹಾಗೂ ಕೂಡಲಸಂಗಮ ಶ್ರೀಗಳು ಇಬ್ಬರೂ ಕಾರಣ ಎಂದರು.
ಸಮಾಜದ ಹೆಸರಿನಲ್ಲಿ, 2 ಎ ಹೆಸರನ್ನು ನೀವು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದರು.
ಮೋದಿ, ಅಮಿತ್ ಷಾ, ನಡ್ಡಾ, ಪ್ರಲ್ಹಾದ ಜೋಶಿ ಇದೀಗ ಬೊಮ್ಮಾಯಿ ಎಲ್ಲರನ್ನೂ ಟೀಕಿಸಿದ್ದೀರಿ. ನಿಮ್ಮ ಜೊತೆಗೆ ಇದ್ದ ಬೆಲ್ಲದ ಅವರ ಬಗ್ಗೆ ಏನು ಮಾತಾಡಿದ್ದೀರಿ?
ನಿಮ್ಮಿಂದ ಪಕ್ಷದಲ್ಲಿರುವ ಸಮಾಜದ ಇನ್ನುಳಿದ ಮುಖಂಡರು ಮುಜುಗರ ಅನುಭವಿಸುವಂತಾಗಿದೆ ಎಂದರು.
ಸಮಾಜ ಎಂದರೆ ನೀವಷ್ಟೇನಾ? ಸಮಾಜದ ಮುಖಂಡನಾದವನು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು.
2 ಎ ಮೀಸಲಾತಿಗೆ ವಚನಾನಂದ ಶ್ರೀಗಳು ಮೌನವಾಗಿ, ಕಾನೂನು ಬದ್ಧವಾಗಿ ಹೋರಾಟ ಮಾಡುತ್ತಿದ್ದಾರೆ. ಮೀಸಲಾತಿ ಸಿಗುವುದಾದರೆ ಅದು ವಚನಾನಂದ ಶ್ರೀಗಳಿಂದ ಎಂದು ಬಿರಾದಾರ ತಿಳಿಸಿದರು.
ಸಮಾಜ ಸೈಲೆಂಟ್ ಆಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರು ಒಂದಿಲ್ಲಾ ಒಂದು ದಿನ ವೈಲೆಂಟ್ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾವೂ ಒಬ್ಬ ಕೇಂದ್ರ ಸಚಿವರಾಗಿದ್ದವರು. ಮೀಸಲಾತಿ ನೀಡುವ ವಿಧಾನ ನಿಮಗೂ ಗೊತ್ತಿರಬೇಕಲ್ಲ. ನೀವು ನಿಮ್ಮ ವೈಯಕ್ತಿಕ ಕ ಬದುಕಿನ ಬಗ್ಗೆ ಮಾತನಾಡಿದರೆ ಯಾರೂ ಕೇಳಲ್ಲ. ಆದರೆ ನೀವು ಸಮಾಜವನ್ನು ಪ್ರತಿನಿಧಿಸುವಾಗ ವಿವೇಕದಿಂದ ಮಾತನಾಡುವುದನ್ನು ಕಲಿಯಬೇಕೆಂದರು.
ಸಮಾಜದ ಹೆಸರಿನಲ್ಲಿ ರಾಜಕೀಯ ಬೇಡ. ಪಂಚಮಸಾಲಿ ಸಮಾಜದ ಮೂರು ಪೀಠಗಳು ಒಂದು ಶಕ್ತಿಯಾಗಿದ್ದು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಬೇರೆಯವರಿಗೆ ನಮ್ಮ ನಡುವಳಿಕೆಯಿಂದ ಬೇಸರವಾಗದಂತೆ ನಡೆದುಕೊಳ್ಳಬೇಕೆಂದು ತಿಳಿ ಹೇಳಿದರು.
ಮುಖಂಡ ಭೀಮಾಶಂಕರ ಹದನೂರ ಮಾತನಾಡಿ, ಯತ್ನಾಳ ಅವರು ಯಡಿಯೂರಪ್ಪ ಅವರಿಗೆ ಟಿಕೆಟ್ ಕೊಡುತ್ತಾರೆಂದಾಗ ಹೊಗಳಿದರು. ಬಳಿಕ ಅವರನ್ನೇ ಬೈಯ್ದರು. ಇದೀಗ ಎಲ್ಲ ಕಡೆ ಕೆಟ್ಟಿತೆಂದು ಸಮಾಜ ಹಿಡಿದಿದ್ದಾರೆ. ಸಚಿವ ಸ್ಥಾನ ಸಿಕ್ಕಿದ್ದರೆ ಇದೇ ಯತ್ನಾಳರ ನಡೆಯೇ ಬೇರೆಯಾಗಿರುತ್ತಿತ್ತು ಎಂದರು.
ಸಮಾಜದ ಹೆಸರು ಹೇಳಿಕೊಂಡು ಸಚಿವರಾಗಬೇಕೆಂಬ ಕಾರಣದಿಂದ ಯತ್ನಾಳ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಹೇಳುವ ನೈತಿಕತೆ ಇವರಿಗಿಲ್ಲ. ಟಿಕೆಟ್ ಕೊಟ್ಟರೆ ಮಾತ್ರ ಪಕ್ಷ ನಿಷ್ಠೆ ಯಾ? ಈ ಹಿಂದೆ ಬಿಜೆಪಿ ವಿರುದ್ದವೇ ಚುನಾವಣೆ ಮಾಡಿದರಲ್ಲ..ಆಗೆಲ್ಲಿತ್ತು ಪಕ್ಷ ನಿಷ್ಠೆ ಎಂದು ಪ್ರಶ್ನಿಸಿದರು.
ತನ್ನ ತಾನೇ ಬಣ್ಣಿಸಿಕೊಳ್ಳಲು ಸಮಾಜದ ವೇದಿಕೆ ಬಳಸಿಕೊಳ್ಳಬಾರದು. ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡಿದರೆ ಹೀರೋ ಆಗುತ್ತೇನೆಂಬ ಭ್ರಮೆ ಇರಬಾರದು ಎಂದರು.
ಯತ್ನಾಳ ಅವರ ವಿಷಯದಲ್ಲಿ ಕೂಡಲ ಸಂಗಮ ಶ್ರೀಗಳಿಗೂ ಒಳಗೊಳಗೆ ಪಶ್ಚಾತ ಕಾಡುತ್ತಿದೆ ಎಂದು ಅನ್ನಿಸುತ್ತಿದೆ. ಪಂಚಮಸಾಲಿ ಸಮಾಜದ ಮೂರು ಪೀಠಗಳಿಗೂ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ ಎಂದ ಹದನೂರ, ಯತ್ನಾಳ ಅವರನ್ನು ಪಕ್ಷದಿಂದ ಹೊರಗೆ ಹಾಕಿದರೆ ಹೋಮ ಹವನ ಮಾಡುವುದಾಗಿ ತಿಳಿಸಿದರು.
ರವಿ ಮೂಕರ್ತಿಹಾಳ, ಸಂದೀಪ ಪಾಟೀಲ ಮತ್ತಿತರರಿದ್ದರು.