ವಿಜಯಪುರ

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಅವಾಂತರ, ಬಾಣಂತಿಯರ ಗೋಳಾಟ, ಸಿಜೇರಿಯನ್ ತನ್ನಿಂತಾನೇ ಓಪನ್

ವಿಜಯಪುರ: ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊತ್ತಿರುವ, ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿರುವ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಂಡೂ ಕೇಳರಿಯದಂತ ಅವಾಂತರ ನಡೆದಿದೆ…!

ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಶಕ್ತರಿಲ್ಲದ, ಬಡ ಬಾಣಂತಿಯರ ಜೀವದ ಜೊತೆ ವೈದ್ಯಕೀಯ‌ ಸಿಬ್ಬಂದಿ ಚೆಲ್ಲಾಟವಾಡುತ್ತಿರುವುದು ಕಂಡು ಬಂದಿದೆ.

ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 25 ಕ್ಕೂ ಅಧಿಕ ಬಾಣಂತಿಯರಿಗೆ ಸಿಜೇರಿಯನ್ ಮಾಡಲಾಗಿದ್ದು ತನ್ನಿಂತಾನೇ ಹೊಲಿಗೆಗಳು ಬಿಚ್ಚಿಕೊಳ್ಳುತ್ತಿವೆ.
ಶುಕ್ರವಾರದಿಂದಲೇ ಇಂಥ ಪ್ರಕರಣ ಬೆಳಕಿಗೆ ಬಂದರೂ ಶನಿವಾರ ಬೆಳಗಿನ ಜಾವದವರೆಗೂ ಯಾರೊಬ್ಬರೂ ಆರೋಗ್ಯ ವಿಚಾರಿಸಿಲ್ಲ ಎಂಬುದು ಬಾಣಂತಿಯರು ಹಾಗೂ ಅವರ ಕುಟುಂಬಸ್ಥರ ಆರೋಪ.

ಏಕಾಏಕಿ ಹೊಲಿಗೆಗಳು ಬಿಚ್ಚಿಕೊಳ್ಳುತ್ತಿರುವ ಕಾರಣ ಕುಟುಂಬಸ್ಥರಲ್ಲಿ ತೀವ್ರ ಆತಂಕ ಕಾಣಿಸಿಕೊಂಡಿದೆ. ಕುಟುಂಬಸ್ಥರು ಭಯಭೀತರಾಗಿದ್ದಾರೆ.
ಇನ್ನೂ ಕೆಲವರು ಬಿಡುಗಡೆಯಾಗಿ ಮನೆಗೆ ತೆರಳಿದ್ದು ಇದೀಗ ಹೊಲಿಗೆ ಬಿಚ್ಚಿಕೊಳ್ಳುತ್ತಿರುವ ಕಾರಣ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಕೇರ್ ಮಾಡುತ್ತಿಲ್ಲ‌ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ, “ತಾಯಿ ಮತ್ತು ಮಕ್ಕಳ
ಆಸ್ಪತ್ರೆಯಲ್ಲಿ‌ ಒಂದೇ ‌ಆಪರೇಷನ್ ಥಿಯೇಟರ್ ಇದೆ. ಸಿಜೇರಿಯನ್ ಹೆರಿಗೆ ಆದವರಿಗೆ ತೊಂದರೆ ಆಗಿದ್ದು‌
ನಿಜ. ದಿನಕ್ಕೆ ಸರಾಸರಿ‌ 40 ಕ್ಕೂ ಅಧಿಕ ಹೆರಿಗೆ ಪ್ರಕರಣಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲು ಆಗುತ್ತವೆ. ಈ‌ ಪೈಕಿ ನಿತ್ಯ ಕನಿಷ್ಟ 15 ಗರ್ಭಿಣಿಯರಿಗೆ ಸಿಜೇರಿಯನ್ ಹೆರಿಗೆ ಆಗುತ್ತವೆ.
ಒಂದೇ ಮಹಾಶಸ್ತ್ರಚಿಕಿತ್ಸಾ ಘಟಕ ಇರುವ ಕಾರಣ ಸಮಸ್ಯೆ ಆಗಿದೆ.
ಹೆಚ್ಚು ಹೆರಿಗೆಗಳು ಆಗುತ್ತಿರುವ ಕಾರಣ ಓಟಿಯನ್ನು ಸರಿಯಾಗಿ ಕಾರ್ಬೋಲೈಜೇಷನ್ (ಶುಚೀಕರಣ) ಮಾಡಲಾಗುತ್ತಿಲ್ಲ.
ಇನ್ನೊಂದು ಓಟಿ ತೆರೆಯಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಮುಕ್ತಾಯವಾಗಲಿದೆ.
ಸದ್ಯ ಪುನಃ ಆಸ್ಪತ್ರೆಗೆ ದಾಖಲಾಗಿರುವ ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಲಾಗುತ್ತದೆ” ಎಂದು‌ ಪ್ರತಿಕ್ರಿಯಿಸಿದ್ದಾರೆ.

error: Content is protected !!